ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ರೈತ ಮುಖಂಡರ ನಿಯೋಗವು ಭೇಟಿಯಾಗಿ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು. ಮಳೆ ಹಾನಿ ಪರಿಹಾರ ಹೆಚ್ಚಿಸುವ ಭರವಸೆ ಮುಖ್ಯಮಂತ್ರಿ ನೀಡಿದರು.
ರೈತ ಮುಖಂಡರು ರಾಜ್ಯದ 38,000 ಕೆರೆಗಳ ಹೂಳು ತೆಗೆಯಲು ಯೋಜನೆ ರೂಪಿಸಿ ಅನುದಾನ ನಿಗದಿ ಮಾಡಲು, ಕಬ್ಬಿನ ಎಫ್‌ಆರ್‌ಪಿಗೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಲು ಹಾಗೂ 2023-24ರ ಸಾಲಿನ ಬಾಕಿ ಹಣ ಬಿಡುಗಡೆ ಮಾಡಲು ಒತ್ತಾಯಿಸಿದರು.
ಅತಿವೃಷ್ಟಿ ಹಾನಿ ಪರಿಹಾರವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಮಳೆ ಆಶ್ರಯ ಎಕರೆಗೆ ₹25,000 ಹಾಗೂ ನೀರಾವರಿ ಎಕರೆಗೆ ₹40,000 ಪರಿಹಾರ ನೀಡಬೇಕು ಎಂದು ನಿಯೋಗ ಮನವಿ ಮಾಡಿತು. ಜೊತೆಗೆ ಕೆಐಡಿಬಿ ವಶಪಡಿಸಿಕೊಂಡು ಖಾಲಿ ಬಿಟ್ಟಿರುವ ಜಮೀನುಗಳನ್ನು ರೈತರಿಗೆ ವಾಪಸ್ ನೀಡುವಂತೆ ಆಗ್ರಹಿಸಲಾಯಿತು.
ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿಸುವ ಖಾತ್ರಿ ಯೋಜನೆ ಜಾರಿಗೆ ತಂದಿರುವುದನ್ನು ಸ್ವಾಗತಿಸಿದ ರೈತ ಮುಖಂಡರು, ಸಹಕಾರ ಸಂಘಗಳ ಜೊತೆಗೆ ರೈತ ಉತ್ಪಾದಕ ಸಂಸ್ಥೆಗಳಿಗೂ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ನಿಯೋಗದಲ್ಲಿ ಕುರುಬರು ಶಾಂತಕುಮಾರ, ಬಲ್ಲೂರ ರವಿಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa