ಗದಗ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದಸರಾ–ದೀಪಾವಳಿ ಹಬ್ಬವನ್ನು ಎದುರು ನೋಡುತ್ತಿದ್ದ ಹೂವು ಬೆಳೆಗಾರ ರೈತರಿಗೆ ಈ ಬಾರಿ ನಿರಂತರ ಮಳೆ ಆಘಾತ ತಂದಿದೆ. ಹಬ್ಬದ ಸೀಸನ್‌ನಲ್ಲಿ ಬಂಪರ್ ಲಾಭದ ನಿರೀಕ್ಷೆಯಲ್ಲಿದ್ದ ಗದಗ ಜಿಲ್ಲೆಯ ರೈತರ ಹೂವಿನ ತೋಟಗಳು ನಿತ್ಯ ಒಣಗುತ್ತಿದ್ದು, ಕನಸುಗಳು ನುಚ್ಚುನೂರಾಗಿವೆ.
ಗದಗ ತಾಲೂಕಿನ ಲಕ್ಕುಂಡಿ, ಶಿರುಂಜ್, ಪಾಪನಾಶಿ, ಕಣವಿ ಹಾಗೂ ಹೊಸೂರ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಸೇವಂತಿ, ಗಲಾಟೆ, ಚೆಂಡುಹೂವು ಸೇರಿದಂತೆ ವಿವಿಧ ಹೂವಿನ ತೋಟಗಳು ಹಸುರಿನಿಂದ ಕಂಗೊಳಿಸುತ್ತಿದ್ದವು. ರೈತರು ಒಂದು ಎಕರೆ ಹೂವು ಬೆಳೆಯಲು 1 ಲಕ್ಷದಿಂದ 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮಳೆಗಾಲದ ಆರಂಭದಲ್ಲಿ ತೋಟಗಳು ಹಸಿರಿನಿಂದ ತುಂಬಿ ಭರ್ಜರಿ ಹೂವು ಬಿಡುತ್ತಿದ್ದವು. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಈ ಹೂವುಗಳು ಈಗ ನಿರಂತರ ಮಳೆಯಿಂದ ಒಣಗಿ ಬಾಡುತ್ತಿವೆ.
“ಸಂಜೆ ತೋಟಕ್ಕೆ ಹೋದಾಗ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡಗಳು ಬೆಳಗ್ಗೆ ಬಂದು ನೋಡಿದರೆ ಒಣಗಿರುವುದು ಮನಸ್ಸು ನೋವುಂಟುಮಾಡುತ್ತಿದೆ” ಎಂದು ರೈತರು ಕಣ್ಣೀರಿನ ಸ್ವರದಲ್ಲಿ ಹಂಚಿಕೊಂಡಿದ್ದಾರೆ. ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿ ಗಿಡಗಳ ಬೇರು ಕೊಳೆಯುತ್ತಿರುವುದೇ ಹೂವು ಬಾಡಲು ಪ್ರಮುಖ ಕಾರಣ ಎಂದು ರೈತರು ಹೇಳಿದ್ದಾರೆ.
ಹಬ್ಬದ ಮಾರುಕಟ್ಟೆಯಲ್ಲಿ 300 ರಿಂದ 400 ಕೆ.ಜಿ. ಹೂವು ಮಾರಾಟವಾಗಿ ಎಕರೆಗೆ 3 ರಿಂದ 4 ಲಕ್ಷ ರೂಪಾಯಿ ಆದಾಯ ಬರಬೇಕಿತ್ತು. ಆದರೆ, ತೋಟಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ ರೈತರ ಬಾಯಿಗೆ ಬಣ್ಣವೇ ಹಚ್ಚಿಲ್ಲ. ಒಬ್ಬೊಬ್ಬ ರೈತರು ನಾಲ್ಕು–ಐದು ಎಕರೆಗಳಲ್ಲಿ ಹೂವು ಬೆಳೆಸಿ 5 ರಿಂದ 7 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ, ಹೂವಿನ ಗಿಡಗಳು ಒಣಗುತ್ತಿರುವುದು ಕಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
“ದಸರಾ, ದೀಪಾವಳಿಯಲ್ಲಿ ಭರ್ಜರಿ ಲಾಭ ಬರುತ್ತದೆ ಎಂದು ಕನಸು ಕಂಡಿದ್ದೇವೆ. ಆದರೆ, ಈಗ ಬದಲಾಗಿ ಸಾಲದ ಹೊರೆ ಹೆಚ್ಚಾಗಿದೆ. ಹೂವಿನೊಂದಿಗೆ ನಮ್ಮ ಬದುಕು ಬಾಡುತ್ತಿದೆ” ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ನಷ್ಟ ಉಂಟಾದರೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಮ್ಮ ಗ್ರಾಮಗಳಿಗೆ ಭೇಟಿ ನೀಡಿಲ್ಲ, ಯಾವುದೇ ರೀತಿಯ ಪರಿಶೀಲನೆ ಮಾಡಿಲ್ಲ ಎಂಬ ಆರೋಪವನ್ನು ರೈತರು ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ರೈತರ ಮನಸ್ಸಿನಲ್ಲಿ ಆಕ್ರೋಶ ಹುಟ್ಟಿಸಿದೆ.
ಹೂವು ಬೆಳೆಗಾರರ ಈ ದುಸ್ಥಿತಿ ಜಿಲ್ಲೆಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ರೈತರಿಗೆ ತಕ್ಷಣ ಪರಿಹಾರ ಘೋಷಿಸಿ, ಹೂವಿನ ತೋಟ ಹಾನಿ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP