ಗದಗ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲೇ ಅತೀ ಹೆಚ್ಚು ಹೆಸರು ಬೆಳೆಯುವ ಗದಗ ಜಿಲ್ಲೆಯ ರೈತರು ಈ ಬಾರಿ ದೊಡ್ಡ ಆಘಾತ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ಬಂಪರ್ ಹೆಸರು ಬೆಳೆದು “ಝಣಝಣ ಕಾಂಚಾಣ” ಎಣಿಸುತ್ತಿದ್ದ ಅನ್ನದಾತರಿಗೆ ನಿರಂತರ ಮಳೆ ಕಣ್ಣೀರಾಗಿಸಿದೆ. ಜಮೀನಿನಲ್ಲೇ ಹೆಸರು ಮೊಳಕೆಯೊಡೆದು ಕೊಳೆತು ಹೋಗಿರುವುದು ರೈತರ ಕನಸುಗಳನ್ನು ನುಚ್ಚುನೂರಾಗಿಸಿದೆ.
ಜಿಲ್ಲೆಯಲ್ಲಿ ಈ ಬಾರಿ 1 ಲಕ್ಷ 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಉತ್ತಮ ಮಳೆಯ ಹಿನ್ನಲೆಯಲ್ಲಿ ಬೆಳೆಯು ಹಸಿರಾಗಿದ್ದು ಭರ್ಜರಿಯಾಗಿ ಬೆಳೆದಿತ್ತು. ದಸರಾ–ದೀಪಾವಳಿಯ ಸೀಸನ್‌ನಲ್ಲಿ ಉತ್ತಮ ಬೆಲೆ ಸಿಗಲಿದೆ, ಲಾಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಸಂಭ್ರಮಿಸುತ್ತಿದ್ದರು. ಆದರೆ, ನಿರಂತರ ಮಳೆಯಿಂದಾಗಿ ಜಮೀನಿನಲ್ಲೇ ಬೆಳೆ ಹಾಳಾಗಿ, ಉಳಿದ ಹೆಸರು ಕೂಡ ಗುಣಮಟ್ಟ ಕಳೆದುಕೊಂಡಿದೆ.
ಒಂದು ಎಕರೆ ಹೆಸರು ಬೆಳೆ ಬೆಳೆಯಲು 15 ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಒಂದು ಎಕರೆಗೆ 4 ರಿಂದ 6 ಕ್ವಿಂಟಲ್ ಇಳುವರಿ ಸಿಗುತ್ತದೆ. ಆದರೆ ಈ ಬಾರಿ ನಿರಂತರ ಮಳೆಯಿಂದಾಗಿ ಕೇವಲ 1 ರಿಂದ 2 ಕ್ವಿಂಟಲ್ ಮಾತ್ರ ಉತ್ಪಾದನೆ ಬಂದಿದೆ. ರೈತರು ತಮ್ಮನ್ನು ದೇವರ ದಯೆಗೆ ಬಿಟ್ಟುಕೊಟ್ಟಂತಾಗಿರುವ ಸ್ಥಿತಿ ಉಂಟಾಗಿದೆ.
ಎಪಿಎಂಸಿ ಮಾರುಕಟ್ಟೆಗೆ ಅಳಿದುಳಿದ ಹೆಸರು ತಂದು ಮಾರಾಟಕ್ಕೆ ಇಟ್ಟ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಮಳೆಗೆ ತೇವಗೊಂಡ ಕಾರಣ ಹೆಸರು ಗುಣಮಟ್ಟ ಕುಸಿದಿದ್ದು, ಕ್ವಿಂಟಾಲ್‌ಗೆ ಕೇವಲ ₹5,000 ರಿಂದ ₹8,000 ಮಾತ್ರ ದೊರೆಯುತ್ತಿದೆ. ರೈತರು ನಿರೀಕ್ಷಿಸಿದ್ದ ದರಕ್ಕಿಂತ ಇದು ಅರ್ಧಕ್ಕಿಂತಲೂ ಕಡಿಮೆ.
ಮಾರುಕಟ್ಟೆಗೆ ಹೆಸರು ತರಲು ಹರಸಾಹಸ ಪಡುತ್ತಿರುವ ರೈತರು, ದರ ಕೇಳಿ ಅಕ್ಷರಶಃ ಕಂಗಾಲಾಗುತ್ತಿದ್ದಾರೆ. “ಬೆಳೆ ಹಾನಿಯೂ ಇಲ್ಲ, ವಿಮೆಯೂ ಇಲ್ಲ, ಈಗ ಮಾರ್ಕೆಟ್‌ನಲ್ಲೂ ಬೆಲೆಯೂ ಇಲ್ಲ. ನಮ್ಮ ಪಾಡು ದೇವರಿಗೆ ಪ್ರೀತಿ” ಎಂದು ರೈತರು ಗೋಳಾಡುತ್ತಿದ್ದಾರೆ.
“ಹೆಸರು ಖರೀದಿ ಕೇಂದ್ರ ತೆರೆಯದ ಕಾರಣ ರೈತರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ತಕ್ಷಣ ಬೆಂಬಲ ಬೆಲೆಗೆ ಹೆಸರು ಖರೀದಿ ಮಾಡಬೇಕು. ಆಗ ಮಾತ್ರ ರೈತರಿಗೆ ಸ್ವಲ್ಪ ಆಸರೆ ದೊರೆಯುತ್ತದೆ” ಎಂದು ರೈತರು ಆಗ್ರಹಿಸಿದ್ದಾರೆ.
ಬೆಲೆ ಕುಸಿತ ಕುರಿತು ಪ್ರಶ್ನಿಸಿದಾಗ, ವ್ಯಾಪಾರಿಗಳು “ಈ ಬಾರಿ ನಿರಂತರ ಮಳೆಯಿಂದ ಹೆಸರು ಗುಣಮಟ್ಟ ತೀವ್ರ ಕಳಪೆಯಾಗಿದೆ. ಟೆಂಡರ್ ದರ ಗುಣಮಟ್ಟಕ್ಕೆ ಅನುಗುಣವಾಗಿಯೇ ಇರುತ್ತದೆ. ಗುಣಮಟ್ಟ ಕುಸಿದಿರುವುದರಿಂದ ದರ ಸ್ವಾಭಾವಿಕವಾಗಿ ಇಳಿಕೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಗದಗ ಜಿಲ್ಲೆಯ ರೈತರು ಈಗ ಒಂದೇ ಒತ್ತಾಯ ಮಾಡುತ್ತಿದ್ದಾರೆ – ತಕ್ಷಣ ಹೆಸರು ಖರೀದಿ ಕೇಂದ್ರ ತೆರೆಯಬೇಕು ಮತ್ತು ಬೆಂಬಲ ಬೆಲೆಯಲ್ಲಿ ಖರೀದಿ ಪ್ರಾರಂಭಿಸಬೇಕು. ಹಾನಿಗೊಳಗಾದ ಬೆಳೆಗಾಗಿ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ಹೆಸರು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.
ಹಿಂದೂಸ್ತಾನ್ ಸಮಾಚಾರ್ / lalita MP