ಗದಗ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಹಿಳಾ ಮೀಸಲಾತಿ ಬಿಲ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಂಸತ್ತಿನಲ್ಲಿ ಪಾಸಾದ ಮಹಿಳಾ ಮೀಸಲಾತಿ ಬಿಲ್ 2028ರ ವಿಧಾನ ಸಭಾ ಚುನಾವಣೆಯಲ್ಲಿ ಜಾರಿಯಾಗುವುದಾಗಿ ಹೇಳಿದರು.
“ಮಧ್ಯಂತರ ಚುನಾವಣೆ ನಡೆದರೆ ಅದು ಜಾರಿಯಾಗುವುದಿಲ್ಲ. ಆದರೆ, ನಿಯಮಿತ ಚುನಾವಣೆಗೆ ಮೀಸಲಾತಿ ಖಚಿತ. ಮಹಿಳೆಯರಲ್ಲಿ ಜಾತಿ ಆಧಾರಿತ ಒಳಮೀಸಲಾತಿಯೂ ಜಾರಿಗೆ ಬರಲಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಮೋದಿಯವರನ್ನು ಅಭಿನವ ಬಸವಣ್ಣನೆಂದು ಹೊಗಳಿದ ಕಾರಜೋಳ, “ಬಸವಣ್ಣ 900 ವರ್ಷಗಳ ಹಿಂದೆ ಲಿಂಗಭೇದ ನಿಲ್ಲಿಸಿದರು. ಈಗ ಮೋದಿ ಅವರು ಮಹಿಳಾ ಮೀಸಲಾತಿ ಬಿಲ್ ಪಾಸು ಮಾಡಿ ಬಸವಣ್ಣನ ಆಶಯ ಜಾರಿಗೊಳಿಸಿದ್ದಾರೆ. ಹೀಗಾಗಿ ಪ್ರಧಾನಿ ಅಭಿನವ ಬಸವಣ್ಣ” ಎಂದು ಕೊಂಡಾಡಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ
ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಕಾರಜೋಳ, “ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಹದಗೆಟ್ಟ ರಸ್ತೆಯಿಂದ ಜನರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿದೆ. ಸಾರಾಯಿ ದರ 400 ಪಟ್ಟು ಹೆಚ್ಚಾಗಿದೆ. ಇಂತಹ ಕೆಟ್ಟ, ಭ್ರಷ್ಟ, ಅಭಿವೃದ್ಧಿ ಶೂನ್ಯ ಸರ್ಕಾರ ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಕಂಡಿಲ್ಲ” ಎಂದು ಕಿಡಿಕಾರಿದರು.
ಅವರು, “ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾಗಿದ್ದ ಎಸ್ ಇ ಪಿ ಮತ್ತು ಟಿ ಎಸ್ ಪಿ ಯೋಜನೆಗಳ 38,500 ಕೋಟಿ ರೂಪಾಯಿ ದುರ್ಬಳಕೆ ಮಾಡಲಾಗಿದೆ. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ” ಎಂದು ಆರೋಪಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ತೀವ್ರ ಟೀಕೆ
ಧರ್ಮಸ್ಥಳದ ವಿಚಾರವಾಗಿ ಕಾರಜೋಳ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, “ದೂರು ಬಂದ ನಂತರ ಸ್ಥಳೀಯ ಪೊಲೀಸ್ ಠಾಣೆ ತನಿಖೆ ನಡೆಸಬೇಕಾಗಿತ್ತು. ಆದರೆ ಸರ್ಕಾರ ಎಸ್ ಐ ಟಿ ರಚಿಸಿ ಅಪಪ್ರಚಾರಕ್ಕೆ ಅವಕಾಶ ನೀಡಿದೆ. ಧಾರ್ಮಿಕ ಸಂಸ್ಥೆಯ ಮೇಲೆ ದಾಳಿ ಮಾಡುವುದು, ಅಪಪ್ರಚಾರ ಮಾಡುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮ-ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಹಚ್ಚುತ್ತಿರುವ ಸರ್ಕಾರ: ಕಾರಜೋಳ
“ರಾಜ್ಯದಲ್ಲಿ ನೆಮ್ಮದಿಯಿಂದ ಬಾಳಲು ಅವಕಾಶ ಕೊಟ್ಟಿಲ್ಲ. ಪ್ರತಿದಿನ ಧರ್ಮ-ಧರ್ಮಗಳ ನಡುವೆ ಹುಳಿ ಹಿಂಡುವ, ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳ ಹಬ್ಬ ಬಂದರೆ ಪೊಲೀಸರ ಮೂಲಕ ಕಿರಿಕ್ ಮಾಡುತ್ತಿದ್ದಾರೆ. ಗಣಪತಿ ಮೆರವಣಿಗೆಯ ಮೇಲೆ ಕಲ್ಲು ಎಸೆದರೆ ಅದು ಸರ್ಕಾರದ ವೈಫಲ್ಯ. ಹೀಗೆ ಮುಂದುವರಿಸಿದರೆ ಸರ್ಕಾರಕ್ಕೆ ಅಧಿಕಾರದಲ್ಲಿ ಇರಲು ಅರ್ಹತೆ ಇಲ್ಲ” ಎಂದು ಕಿಡಿಕಾರಿದರು.
ಶಾಸಕರ ಹೇಳಿಕೆ ಕುರಿತು ಟಾಂಗ್
ಇತ್ತೀಚೆಗೆ ಶಾಸಕ ಸಂಗಮೇಶ್ ನೀಡಿದ “ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, “ಅಂತಹ ಹೇಳಿಕೆ ತಂದೆ-ತಾಯಿಗೆ ಮಾಡಿದ ಅಪಮಾನ. ಮತಕ್ಕಾಗಿ ತಂದೆ-ತಾಯಿಯನ್ನೇ ಬದಲಿ ಮಾಡುವುದೊಂದು ಅಸಹ್ಯಕರ ರಾಜಕೀಯ. ನಾನು ಹಿಂದೂ, ನನ್ನ ತಂದೆ ಹಿಂದೂ, ಅಜ್ಜ ಹಿಂದೂ ಎಂದು ಹೆಮ್ಮೆಪಡುತ್ತೇನೆ” ಎಂದು ತಿರುಗೇಟು ನೀಡಿದರು.
ಹಿಂದೂಸ್ತಾನ್ ಸಮಾಚಾರ್ / lalita MP