ರಾಯಚೂರು, 11 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಹಾಗೂ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ನಗರದ ಚಂದ್ರಬಂಡಾ ರಸ್ತೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅವರು, ಬೆಳಿಗ್ಗೆ 11.30ಕ್ಕೆ ನಗರದ ಯರಮರಸ್ ಸರ್ಕಿಟ್ ಹೌಸನಿಂದ ಸಂಚಾರ ಆರಂಭಿಸಿದರು. ಭೇಟಿ ಸಂದರ್ಭದಲ್ಲಿ, ಅವರು ವಸತಿ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಕುಡಿಯುವ ನೀರು, ಸೋಪು, ತಲೆಗೆ ಹಚ್ಚುವ ಎಣ್ಣೆ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ವಸತಿ ಶಾಲೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳ ಹೆಸರು, ಅವರ ಗುರಿ ಬಗ್ಗೆ ಕೇಳುತ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಧ್ಯಕ್ಷರು, ಸರಿಯಾಗಿ ಓದಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಆಯ್ಕೆಯಾಗಿ ತಂದೆ- ತಾಯಿಗಳಿಗೆ ಹಾಗೂ ಶಾಲೆಗೆ, ಜಿಲ್ಲೆ, ರಾಜ್ಯಕ್ಕೆ ಒಳ್ಳೆಯ ಹೆಸರು ತರಬೇಕು. ನಿರಂತರ ಅಭ್ಯಾಸ ಮಾಡುತ್ತ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು. ಗುರಿ ಸಾಧನೆಗೆ ಸತತ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳು ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ವೈಯಕ್ತಿಕ ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ ಕಾಪಾಡಿಕೊಂಡು ನಡೆಯಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಏಳ್ಗೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಅಧಿಕಾರಿಗೆ ಸೂಚನೆ: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳನ್ನು ವಸತಿ ಶಾಲೆಗೆ ಆಹ್ವಾನಿಸಿ ಅವರಿಂದ ಒಳ್ಳೆಯ ಸಂದೇಶ ನೀಡಿಸುವ ವ್ಯವಸ್ಥೆ ಮಾಡಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣಕುಮಾರ ಅವರಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಶಿಕ್ಷಕರೊಂದಿಗೆ ಸಭೆ: ಇದೆ ವೇಳೆ ಅಧ್ಯಕ್ಷರು, ವಸತಿ ಶಾಲೆಯ ಶಿಕ್ಷಕರೊಂದಿಗೆ ಸಭೆ ನಡೆಸಿ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು. ಶಿಕ್ಷಕರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಬೇಕು. ವಿದ್ಯಾರ್ಥಿ ಸ್ನೇಹಿಯಾಗಿರಬೇಕು. ಜೀವನ ಕೌಶಲ್ಯಗಳನ್ನು ಕಲಿಸಬೇಕು. ಕಲಿಯಲು ಸ್ಫೂರ್ತಿದಾಯಕ ಮತ್ತು ಸಹಾನುಭೂತಿಯ ವಾತಾವರಣ ಸೃಷ್ಟಿಸಬೇಕು. ಕೇವಲ ವಿಷಯವನ್ನು ಮಾತ್ರವಲ್ಲದೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಬುದ್ಧಿವಂತಿಕೆ, ಚಿಂತನೆಯನ್ನು ಬೆಳೆಸಬೇಕು ಎಂದರು.
ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಿ: ಭೇಟಿ ಸಂದರ್ಭದಲ್ಲಿ ಅಧ್ಯಕ್ಷರು ಎಸ್ಸೆಸ್ಸೆಲ್ಸಿ ಫಲಿತಾಂಶದ ಬಗ್ಗೆ ಕೇಳಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಹೆಚ್ಚಳಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ವಿದ್ಯಾರ್ಥಿಗಳ ಪ್ರಾಥಮಿಕ, ಪ್ರೌಢಶಿಕ್ಷಣದ ಹಂತಗಳ ಬುನಾದಿ ಗಟ್ಟಿಯಾಗಬೇಕು. ಈ ನಿಟ್ಟಿನಲ್ಲಿ ಯೋಚಿಸಿ ಶಿಕ್ಷಕರು ಶ್ರದ್ಧೆಯಿಂದ ತಮ್ಮ ಕಾರ್ಯ ನಿರ್ವಹಣೆ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರ ವಿಶೇಷ ಕರ್ತವ್ಯಧಿಕಾರಿ ಮುಜಿಬುಲ್ಲಾ ಜಫಾರಿ, ಎಸ್ಪಿ ಅಬ್ದುಲ್ ಖಾದರ್, ತಾಲೂಕು ಕಲ್ಯಾಣಾಧಿಕಾರಿ ನರಸಿಂಹ ನಾಯಕ, ವಸತಿ ಶಾಲೆಯ ಪ್ರಾಂಶುಪಾಲರಾದ ವಿಜಯಮಹಾಂತೇಶ್, ವಸತಿ ಶಾಲೆಯ ವಾರ್ಡನ್ ವಿಶ್ವನಾಥ, ರಾಯಚೂರು ಗ್ರಾಮೀಣ ಠಾಣೆಯ ಅಧಿಕಾರಿ ಶಾಂತಮ್ಮ
ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್