ಗದಗ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ತೋಟಗಂಟಿ ಗ್ರಾಮದಲ್ಲಿ ಅನ್ನದಾನೇಶ್ವರ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ 5 ಅಡಿ ಎತ್ತರದ ಸಾರ್ವಜನಿಕ ಗಣಪತಿ ಮೂರ್ತಿಯ ಸುತ್ತಮುತ್ತ ಇಲಿ ಮರಿಯೊಂದು ಓಡಾಡುತ್ತಿದೆ. ಅದನ್ನು ಎತ್ತಿಕೊಂಡು ಸಮೀಪದ ಖಾಲಿ ಜಾಗದಲ್ಲಿ ಬಿಟ್ಟರೂ ಪುನಃ ಮೂರ್ತಿಯ ಕಡೆ ಬರುತ್ತಿದೆ.ಸದ್ಯ ಇದನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.
ಪ್ರತಿವರ್ಷದಂತೆ 5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಕಿನ್ನಾಳ ಗ್ರಾಮದಿಂದ ತರಲು ಹೋಗಿದ್ದಾರೆ. ಕಿನ್ನಾಳ ಗ್ರಾಮದಿಂದ ಗಣಪತಿ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ತಂದೆವು. ಆದರೆ, ಅದರೊಂದಿಗೆ ಮೂಷಕ ಇಲಿ ಮಾಡುವುದನ್ನು ಕಲಾವಿದರು ಮರೆತಿದ್ದರು. ಮೂರ್ತಿಯನ್ನು ಕೆಳಗಿಳಿಸಿ, ಪ್ರತಿಷ್ಠಾಪಿಸಿದಾಗ ಇಲಿ ಮರಿ ಕಂಡಿತು. ಅದನ್ನು ಕೈಯಲ್ಲಿ ಹಿಡಿದು, ಬೇರೆಡೆ ಬಿಟ್ಟರೂ ಹೋಗಲಿಲ್ಲ. ಅದಕ್ಕೆ, ಹಣ್ಣು, ಧಾನ್ಯ ಮತ್ತು ಬೀಜದಂತಹ ಆಹಾರ ನೀಡಿ ಅಲ್ಲಿಯೇ ಅದನ್ನು ಓಡಾಡಲು ಬಿಟ್ಟಿದ್ದೇವೆ’ ಎಂದು ಗ್ರಾಮಸ್ಥ ನಾಗರಾಜ ಹೇಳಿದ್ದಾರೆ.
ಸದ್ಯ ಇಲಿಯು ಮೂರ್ತಿಯ ಮುಂದೆ ಕುಳಿತಿದೆ. ಆಗಾಗ ಮಂಟಪದಲ್ಲಿ ಸುತ್ತಾಡುತ್ತದೆ. ಹಣ್ಣು, ಧಾನ್ಯ, ಬೀಜದಂತ ಪದಾರ್ಥ ಹಾಗೂ ತರಕಾರಿಯನ್ನು ತಿನ್ನುತ್ತಿದೆ. ನಂತರ ಮೂರ್ತಿಯ ಪಾದದ ಬಳಿ ಬಂದು ಕುಳಿತುಕೊಳ್ಳುತ್ತಿದೆ. ಯುವಕರು ಎತ್ತಿಕೊಂಡರು ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂದು ಆಯೋಜಕರು ಮಾಹಿತಿ ನೀಡಿದರು. ಗಣಪತಿಯ ವಾಹನವನ್ನು ಮರೆತು ಬಂದ ಕಾರಣಕ್ಕೆ ನಿಜವಾದ ವಾಹನ ಬಂದು ಸೇರ್ಪಡೆಗೊಂಡಿದೆ ಎಂದು ಜನರು ಮಾತನಾಡುತ್ತಿದ್ದಾರೆ.
‘ಇಲಿ ಬಹುಶಃ ಭಯದಿಂದ ಬೇರೆಡೆ ಹೋಗುತ್ತಿಲ್ಲ. ಆಶ್ರಯಕ್ಕಾಗಿ ಗಣಪತಿ ಮೂರ್ತಿ ಬಳಿ ಬಂದಿರಬಹುದು. ಸಹಜ ಸ್ಥಿತಿಗೆ ಬಂದ ಬಳಿಕ, ಅದು ಅಲ್ಲಿಂದ ಹೋಗುತ್ತದೆ. ತೊಂದರೆ ನೀಡದೇ, ಅದನ್ನು ಅದರ ಪಾಡಿಗೆ ಬಿಟ್ಟರೆ ಒಳ್ಳೆಯದು. ಅಷ್ಟೇ ಅಲ್ಲದೆ ಅದೊಂದು ನಿರ್ದಿಷ್ಟ ಜಾಗದಲ್ಲಿ ವಾಸಮಾಡುವ ಪ್ರಾಣಿಯಾಗಿದೆ. ಆಹಾರ ಸರಪಳಿಯ ಮುಖ್ಯ ಕೊಂಡಿಯಾಗಿದೆ ಯಾವುದೇ ಕಾರಣಕ್ಕೂ ಅದಕ್ಕೆ ತೊಂದರೆ ನೀಡಬಾರದು. ನೈಸರ್ಗಿಕವಾಗಿ ಬದುಕಲು ಬಿಡಬೇಕು ಎಂದು' ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳಿದ್ದಾರೆ.
ಈ ಘಟನೆ ಗ್ರಾಮದಲ್ಲಿ ಚರ್ಚೆಯ ವಿಷಯವಾಗಿ ಪರಿಣಮಿಸಿದ್ದು, ದೂರದೂರಿನಿಂದ ಜನರು ಮೂಷಕವನ್ನು ನೋಡಲು ಗಣಪತಿ ಮಂಟಪಕ್ಕೆ ಆಗಮಿಸುತ್ತಿದ್ದಾರೆ. ಕೆಲವರು ಇದನ್ನು ಗಣಪತಿಯ ಚರಿತ್ರೆಯ ಸಂಕೇತ ಎಂದು ಭಾವಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP