ಗದಗ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಇಂದಿನ ದಿನಗಳಲ್ಲಿ ಸಮಾಜದಲ್ಲಿ ಜಾತಿ, ಮತ, ಪಂಥದ ಹೆಸರಿನಲ್ಲಿ ಅಶಾಂತಿ, ಗಲಾಟೆ, ಕೋಮು ದಳ್ಳುರಿ, ಪರಸ್ಪರ ದ್ವೇಷ ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಆದರೆ, ಗದಗ ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಸಂಪೂರ್ಣ ವಿಭಿನ್ನ ವಾತಾವರಣ ನೆಲೆಸಿದೆ. ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಸತತ 15 ವರ್ಷಗಳಿಂದ ಗಣೇಶ ಪ್ರತಿಷ್ಠಾಪನೆ ನಡೆಸುತ್ತಿದ್ದು, ಸಾಮರಸ್ಯದ ಬದುಕಿಗೆ ಮಾದರಿಯಾಗಿದ್ದಾರೆ.
ಗಣೇಶ ಪ್ರತಿಷ್ಠಾಪನೆಗೆ ಹಿಂದೂ-ಮುಸ್ಲಿಂರ ಜಂಟಿ ಮುಂದಾಳತ್ವ ವಹಿಸಲಾಗಿದೆ. ಪ್ರತಿ ವರ್ಷವೂ ಅಂಜುಮಾನ್ ಏ-ಇಸ್ಲಾಂ ಕಮಿಟಿ ಹಾಗೂ ಈಶ್ವರ ಬಸವಣ್ಣ ದೇವಾಲಯದ ಕಮಿಟಿ ಜಂಟಿಯಾಗಿ ಮುಂದಾಗುತ್ತವೆ. ಗ್ರಾಮಸ್ಥರಿಂದಲೇ ದೇಣಿಗೆ ಸಂಗ್ರಹಿಸಿ ಹನ್ನೊಂದು ದಿನಗಳ ಕಾಲ ಮನಮೋಹಕ ಗಣೇಶನ ಪ್ರತಿಷ್ಠಾಪನೆ ಮಾಡಿ ಭಕ್ತಿಪೂರ್ವಕವಾಗಿ ಆರತಿ, ಪೂಜೆ-ಪುನಸ್ಕಾರ, ಸತ್ಯನಾರಾಯಣ ಪೂಜೆ, ಅನ್ನಸಂತಪರ್ಣೆ ಮುಂತಾದ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಗಣೇಶನ ಸಿಂಹಾಸನದ ಮುಂದೆ ಒಂದೆಡೆ ಹಿಂದೂ ಮಹಿಳೆ ಆರತಿ ಹಿಡಿದರೆ, ಇನ್ನೊಂದು ಕಡೆ ಮುಸ್ಲಿಂ ಮಹಿಳೆಯೂ ಅದೇ ನಂಬಿಕೆಯಿಂದ ಭಾಗವಹಿಸುತ್ತಾರೆ. ಪ್ರತಿದಿನ ಸಂಜೆ ಆರತಿಯಲ್ಲಿ ಹಬ್ಬದ ಸಂಭ್ರಮ, ಸಮುದಾಯಗಳ ಒಗ್ಗಟ್ಟು ಸ್ಪಷ್ಟವಾಗಿ ಗೋಚರಿಸುತ್ತದೆ. “ದೇವನೊಬ್ಬ – ನಾಮ ಹಲವಾರು” ಎಂಬ ನಂಬಿಕೆಯನ್ನು ಈ ಗ್ರಾಮ ಜೀವಂತವಾಗಿ ತೋರಿಸುತ್ತಿದೆ.
ಎಲ್ಲಾ ಹಬ್ಬಗಳಿಗೆ ಒಗ್ಗಟ್ಟಿನಿಂದ ಆಚರಣೆ ಮಾಡಲಾಗುತ್ತದೆ. ಕಳಸಾಪುರದಲ್ಲಿ ಕೇವಲ ಗಣೇಶ ಹಬ್ಬವಲ್ಲ, ಬೇರೆಯ ಎಲ್ಲಾ ಧಾರ್ಮಿಕ ಹಬ್ಬಗಳೂ ಸಮಾನ ಉತ್ಸಾಹದಿಂದ ಆಚರಿಸಲಾಗುತ್ತದೆ. ಹಿಂದೂ-ಮುಸ್ಲಿಂರೆಲ್ಲರೂ ಸೇರಿ ರಂಜಾನ್, ಈದ್ ಮೀಲಾದ್, ಮೋಹರಂ, ದಸರಾ, ದೀಪಾವಳಿ ಹೀಗೆ ಎಲ್ಲ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಿದ್ದಾರೆ. ಹೀಗಾಗಿ “ಸಬ್ ಕಾ ಮಾಲೀಕ್ ಏಕ್ ಹೈ” ಎಂಬ ಸಂದೇಶವನ್ನು ತಮ್ಮ ನಡತೆಯಿಂದಲೇ ಸಾರುತ್ತಿದ್ದಾರೆ.
ಸಾಮರಸ್ಯದ ಕೇಂದ್ರಬಿಂದುವಾದ ಕಳಸಾಪುರ ಗ್ರಾಮ, ಇಲ್ಲಿನ ಜನರು ಹೇಳುವಂತೆ, “ಜಾತಿ, ಮತ, ಪಂಥ ಬೇಧವಿಲ್ಲದೆ ಬದುಕುವುದು ನಮ್ಮ ಸಂಸ್ಕೃತಿ. ಗಣೇಶ ಪ್ರತಿಷ್ಠಾಪನೆಯು ನಮ್ಮ ಗ್ರಾಮದಲ್ಲಿ ಒಗ್ಗಟ್ಟು, ಸಹಕಾರ, ಶಾಂತಿ ಹೆಚ್ಚಿಸಿದೆ.
ಕಳಸಾಪುರದ ಭಾವೈಕ್ಯತಾ ಗಣೇಶ ಈಗ ರಾಜ್ಯದ ಮಟ್ಟದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಅಸಹಿಷ್ಣುತೆ, ದ್ವೇಷದ ವಾತಾವರಣ ಹೆಚ್ಚುತ್ತಿರುವ ಸಮಯದಲ್ಲಿ ಈ ಗ್ರಾಮದ ಒಗ್ಗಟ್ಟಿನ ಸಂಭ್ರಮ, ಸಮಾಜಕ್ಕೆ ಹೊಸ ದಾರಿ ತೋರಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP