ಹಂಪಿ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಂಗೀತ ಸಾಧನೆ ಎನ್ನುವುದು ತಾಸುಗಳ ಲೆಕ್ಕದಲ್ಲಿ ನಡೆಯುವಂಥದ್ದಲ್ಲ. ಹಾಗೆ ಲೆಕ್ಕಾಚಾರವಿದ್ದರೆ ಈ ಕ್ಷೇತ್ರದತ್ತ ಬರಲೇಬಾರದು ಎಂದು ಧಾರವಾಡದ ತಬಲಾ ಸಾಧಕ ಶ್ರೀ ಮಣಿಕಂಠ ಸುನಗಾರ ಅವರು ಹೇಳಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗವು ಆಯೋಜಿಸಿದ್ದ ತಬಲಾ ವಾದನ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು.
ತಬಲಾ ವಾದನ ಕುರಿತು ವಿಶೇಷ ಉಪನ್ಯಾಸ ನೀಡುತ್ತ, ವಿದ್ಯಾರ್ಥಿಗಳಿಗೆ ತಬಲಾ ವಾದನ ಕೌಶಲ್ಯ ಬೆಳೆಸಿಕೊಳ್ಳುವ ಕುರಿತು ಅರಿವು ನೀಡಿದರು. ತ್ರಿತಾಲದಿಂದ ಆರಂಭಿಸಿ ವುಟಾನ್, ಕಾಯ್ದಾ, ತುಕುಡಾ ಮುಕುಡಾಗಳಲ್ಲದೆ, ದಿಲ್ಲಿ ಘರಾಣಾ ಕಾಯ್ದಾ, ಬನಾರಸ ಘರಾಣಾ ಕಾಯ್ದಾ, ಲಕ್ನೋ ಘರಾಣಾ ಕಾಯ್ದಾ ಜೊತೆಗೆ ತಾವೇ ಕಂಪೋಸ್ ಮಾಡಿದ ಕಥಕ್ ಥಾಟ್‍ಗಳನ್ನು ಒಂದು ಗಂಟೆ ಕಾಲ ನುಡಿಸಿದರು. ಸಂಗೀತ ಮತ್ತು ನೃತ್ಯ ವಿಭಾಗದ ಅಧ್ಯಾಪಕರಾದ ಡಾ. ತಿಮ್ಮಣ್ಣ ಭೀಮರಾಯ ಹಾರ್ಮೋನಿಯಂ ಸಾಥ್ ನೀಡಿದರು.
ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ಮಾಡಿದ ಶ್ರೀ ಮಣಿಕಂಠ ಸುನಗಾರ ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ವಿಭಾಗದ ವಿದ್ಯಾರ್ಥಿಗಳು ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್