ವಿಜಯಪುರ, 03 ಜುಲೈ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ರವರು ಜುಲೈ 2ರಂದು ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣವಾದ ಎನ್.ಆರ್.ಎಲ್.ಎಮ್ ಸಂಜೀವಿನಿ ಶೆಡ್ ಕಟ್ಟಡ ಹಾಗೂ ನೂತನ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಇದೇ ವೇಳೆ ನೂತನವಾಗಿ ನಿರ್ಮಾಣವಾಗುತ್ತಿರುವ ಗ್ರಂಥಾಲಯ ಕಟ್ಟಡಕ್ಕೆ ಬೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಂಥಾಲಯ ಪೂರ್ಣಗೊಂಡ ತಕ್ಷಣವೇ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು ಎಂದರು.
ಗ್ರಂಥಾಲಯಗಳಲ್ಲಿ ಬರುವ ವಿದ್ಯಾರ್ಥಿಗಳು ಹಾಗೂ ಓದುಗರಿಗೆ ಅನುಕೂಲವಾಗುವಂತೆ ಐಎಎಸ್, ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುವ ಪುಸ್ತಕಗಳನ್ನು ಖರೀದಿಸಿ ಇರಿಸಬೇಕು. ಗ್ರಂಥಾಲಯಕ್ಕೆ ಉತ್ತಮ ಗುಣಮಟ್ಟದ ಮತ್ತು ಆಕರ್ಷಕ ಪೇಂಟಿಂಗ್ ಮಾಡಿಸಬೇಕು ಮತ್ತು ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಗ್ರಾಮದ ಮುಖ್ಯ ರಸ್ತೆಗೆ ಗ್ರಂಥಾಲಯದ ನಾಮಫಲಕವನ್ನು ಅಳವಡಿಸಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.
ಅಂಗನವಾಡಿ ಮಕ್ಕಳಿಗೆ ಬೆಂಚ್ ವಿತರಣೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು, ನಿಡೋಣಿ ಗ್ರಾಮ ಪಂಚಾಯತಿ ವತಿಯಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುರ್ಚಿ ಮತ್ತು ಬೆಂಚ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಸಂವಾದ ನಡೆಸಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ವಿತರಣೆ, ಆಟ, ಪಾಠ ಯೋಗಕ್ಷೇಮ ಕುರಿತು ವಿಚಾರಿಸಿದರು.
ನಿಡೋಣಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಕೇಂದ್ರದಲ್ಲಿ ಕಲ್ಪಿಸಲಾಗಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಮಕ್ಕಳಿಗೆ ವಿತರಣೆ ಮಾಡಿದ ಪೀಠೋಪಕರಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಂಗನವಾಡಿ ಕೇಂದ್ರದ ಸುತ್ತ - ಮುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡಿಕೊಳ್ಳಬೇಕು. ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ, ರೋಗ - ರುಜಿನುಗಳು ಬರದ ಹಾಗೆ ಅಂಗನವಾಡಿಗಳ ಸುತ್ತ ಮುತ್ತ ಸ್ವಚ್ಚತೆ ಕಾಯ್ದುಕೊಂಡಲ್ಲಿ ಎಲ್ಲ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಮಕ್ಕಳ ಕಲಿಕಾ ಸಾಮಥ್ರ್ಯ ಗುಣಮಟ್ಟ ಹೆಚ್ಛಳವಾಗುವಂತೆ ಕಲಿಕೆಗೆ ಆಧ್ಯತೆ ನೀಡಬೇಕು. ಅಡುಗೆ ಕೊಠಡಿಯಲ್ಲಿ ಪ್ರತಿನಿತ್ಯ ಶುಚಿತ್ವ ಕಾಪಾಡಬೇಕು. ಕಡ್ಡಾಯವಾಗಿ ಪ್ರತಿದಿನ ಸಿಬ್ಬಂದಿ ಹಾಗೂ ಮಕ್ಕಳ ಹಾಜರಾತಿ ನಿರ್ವಹಣೆ ಮಾಡಬೇಕು. ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಹಾಗೂ ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಮಕ್ಕಳಿಗೆ ಸಮಯಾನುಸಾರ ಪೌಷ್ಠಿಕ ಆಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಒಕ್ಕೂಟದ ಸದಸ್ಯರೊಂದಿಗೆ ಸಂಘದ ಉಳಿತಾಯ, ಸ್ವ-ಉದ್ಯೋಗ ಮತ್ತು ಸಾಲ ಸೌಲಭ್ಯದಿಂದ ಸಂಘಗಳಿಗೆ ಅನುಕೂಲವಾಗಿರುವ ಬಗ್ಗೆ ಹಾಗೂ ಮಹಿಳಾ ಸಬಲೀಕರಣ ಕುರಿತು ಚರ್ಚಿಸಿದರು.
ಅಧಿಕಾರಿಗಳೊಂದಿಗೆ ಸಭೆ : ತಾಲೂಕ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯತಿಯ ಸಾಮಾನ್ಯ ಮಾಹಿತಿ, ಸರ್ಕಾರಿ ಶಾಲೆಗಳು, ಕುಡಿಯುವ ನೀರಿನ ಮೂಲಗಳು, ಸರ್ಕಾರಿ ಆಸ್ಪತ್ರೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಕುರಿತು ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದ ಸಿಇಓರವರು ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ತುರ್ತಾಗಿ ದುರಸ್ತಿ ಮಾಡಿಸಬೇಕು. ಗ್ರಾಮಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಇತರೆ ಮೂಲ ಸೌಕರ್ಯಗಳನ್ನು ಸಕಾಲದಲ್ಲಿ ಪೂರೈಸಬೇಕು. ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಕಂಪೌಂಡ್, ಹೆಚ್ಚುವರಿ ಕೊಠಡಿಗಳಿಗೆ ಸಂಬಂಧಿಸಿದಂತೆ ದುರಸ್ತಿ ಕಾರ್ಯಗಳಿದ್ದಲ್ಲಿ ತಕ್ಷಣವೇ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಹೊಸ ಅಂಗನವಾಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಇರುವ ಜಾಗಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಕುಡಿಯುವ ನೀರಿನ ವ್ಯವಸ್ಥೆ ಕಾಂಪೌಂಡ್, ಶಾಲಾ ಕೊಠಡಿ ಸಮಸ್ಯೆಗಳಿದ್ದಲ್ಲಿ ಕೂಡಲೇ ಪರಿಹರಿಸಲು ಕ್ರಮ ವಹಿಸಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಲಭ್ಯವಿದ್ದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯಾನವನ ಅನುμÁ್ಠನ ಮಾಡಬೇಕು. ಗ್ರಾಮಗಳಲ್ಲಿ ನಿರಂತರ ಸ್ವಚ್ಛತೆಯನ್ನು ಕಾಪಾಡಬೇಕು. ನಿಯಮಿತವಾಗಿ ಫಾಗಿಂಗ್, ಬ್ಲೀಚಿಂಗ್ ಕಾರ್ಯಗಳನ್ನು ಕೈಗೊಳ್ಳಬೇಕು. ಈ ಮೂಲಕ ಸಾಂಕ್ರಾಮಿಕ ರೋಗಗಳಿಂದ ಮಕ್ಕಳು. ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರನ್ನು ರಕ್ಷಿಸಬಹುದು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಹೇಳಿದರು.
ಬಳಿಕ ನಿಡೋಣಿ ಗ್ರಾಮದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ಪುಸ್ತಕಗಳನ್ನು ಹಾಗೂ ರ್ಯಾಕ್ ಗಳಲ್ಲಿ ವಿವಿಧ ಉತ್ತಮ ಪುಸ್ತಕಗಳನ್ನು ಇರಿಸಬೇಕು. ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ಮಟ್ಟ ಹೆಚ್ಚುವಂತಹ ವಿನೂತನ ಕಲಿಕಾ ಸಾಮಗ್ರಿಗಳನ್ನು ಇರಿಸಬೇಕು ಹಾಗೂ ಮೂಲ ಸೌಕರ್ಯಗಳನ್ನು ಪೂರೈಸಬೇಕು. ಗ್ರಂಥಾಲಯದ ಮೇಲ್ಛಾವಣಿ ಪತ್ರಾಸ್ ಇರುವುದನ್ನು ಗಮನಿಸಿದ ಸಿಇಓರವರು ಇದಕ್ಕೆ ಬದಲಾಗಿ ಪಿಓಪಿ ಮೇಲ್ಛಾವಣಿ ವ್ಯವಸ್ಥೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ: ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ಕೊಡುವ ರೋಗಿಗಳ ವಿವರಗಳ ಕುರಿತು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.
ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಮತ್ತು ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಆಸ್ಪತ್ರೆಯ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿ, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಹಾಜರಾತಿಯನ್ನು ಪ್ರತಿನಿತ್ಯ ಕಡ್ಡಾಯವಾಗಿ ಪರಿಶೀಲಿಸಬೇಕು. ಅನಾರೋಗ್ಯದಿಂದ ಬರುವ ರೋಗಿಗಳ ಮತ್ತು ರೋಗಿಗಳ ಸಂಬಂಧಿಕರೊಡನೆ ಸಂಯಮದಿಂದ ವರ್ತಿಸಿ, ಅವರಿಗೆ ಪರಿಹಾರ ನೀಡಬೇಕು. ಆಸ್ಪತ್ರೆಯ ಸುತ್ತ-ಮುತ್ತಲೂ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು ಮತ್ತು ಆಸ್ಪತ್ರೆಯ ಒಳಾಂಗಣ ಆವರಣವನ್ನೂ ಸಹ ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಎಂದು ಅಲ್ಲಿನ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ, 15 ನೇ ಹಣಕಾಸಿನ ಯೋಜನೆ ಅಡಿ ಮತ್ತು ಗ್ರಾ.ಪಂ. ಅನುದಾನದಿಂದ ನೂತನವಾಗಿ ನಿರ್ಮಿಸಲಾಗಿರುವ ಜ್ಞಾನ ಮತ್ತು ಯೋಗ ಮಂದಿರ ಭೇಟಿ ನೀಡಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜೆ. ಎಸ್. ಪಠಾಣ, ಸಹಾಯಕ ನಿರ್ದೇಶಕರು (ಗ್ರಾ.ಉ) ವ್ಹಿ. ಎಸ್. ಹಿರೇಮಠ, ವೈದ್ಯಾಧಿಕಾರಿಗಳಾದ ಡಾ. ಶೀತಲ ಕಿನಗಿ, ತಾಲೂಕು ಯೋಜಾನಾಧಿಕಾರಿಗಳಾದ ಎಸ್ ಬಿ. ಪಾಟೀಲ, ನಿಡೋಣಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಬಿ. ಹೆಚ್. ಮುಜಾವರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್. ಎಸ್. ಮ್ಯಾಗೇರಿ, ಗ್ರಾಮ ಪಂಚಾಯತಿಯ ಚುನಾಯಿತ ಸದಸ್ಯರು, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಯ ಸಿಬ್ಬಂದಿ, ಮಹಿಳಾ ಒಕ್ಕೂಟಗಳ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande