ರಾಯಚೂರು, 13 ಜೂನ್ (ಹಿ.ಸ.) :
ಆ್ಯಂಕರ್ : ಅಖಿಲ ಭಾರತ ವಕೀಲರ ಒಕ್ಕೂಟ (AILU) ರಾಜ್ಯ ಕರೆಯ ಅನ್ವಯ ಅಖಿಲ ಭಾರತ ವಕೀಲರ ಒಕ್ಕೂಟ ರಾಯಚೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಕೀಲರ ನಾನಾ 13 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ AILU ಸಂಘಟನೆಯು ರಾಜ್ಯದಲ್ಲಿ ವಕೀಲರ ಮತ್ತು ಕಾನೂನು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದೆ. ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು ಮತ್ತು ವಕೀಲರ ಸಂರಕ್ಷಣೆ ಕಾಯ್ದೆ-2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು. ಕಾನೂನು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಮತ್ತು ಅವರ ಭವಿಷ್ಯವನ್ನು ಅಭದ್ರತೆಯಲ್ಲಿಡುವ ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ (AIBE) ರದ್ದು ಪಡಿಸಬೇಕು.
ಕಿರಿಯ ವಕೀಲರ ವೃತ್ತಿ ಆರಂಭದ ಬದುಕಿಗೆ ಪೂರಕವಾಗುವಂತೆ, BCI ನಿರ್ದೇಶನದಂತೆ 3 ವರ್ಷಗಳ ಕಾಲ ಮಾಸಿಕ ರೂ.20,000/- ಸಹಾಯಧನ ನೀಡಬೇಕು. ರಾಜ್ಯದ ಎಲ್ಲಾ ತಾಲ್ಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ರೂ. 5 ಲಕ್ಷ ಅನುದಾನ ಮಂಜೂರು ಮಾಡಬೇಕು ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ರೂ. 10 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಬೇಕು. ವಕೀಲರಿಗೆಅವರ ಕಲ್ಯಾಣ ನಿಧಿಯಿಂದ 25 ಲಕ್ಷ ಹಣವನ್ನು ನೀಡಬೇಕು.
ರಾಜ್ಯ ಸರ್ಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ಒದಗಿಸಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿಗಳನ್ನು ಸ್ಥಾಪಿಸಬೇಕು. ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಬೇಕು. ಹಾಗೆಯೇ ಈಗಿರುವ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿನ ಎಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ಚೇಂಬರ್ಗಳನ್ನು ಸ್ಥಾಪಿಸಬೇಕು. ವ್ಯಾಪಕ ಭ್ರಷ್ಟಾಚಾರವನ್ನು ತಡೆದು ಕಂದಾಯದ ವಿಚಾರಗಳನ್ನು ಕಾನೂನು ಪಾಲನೆಗೆ ಒಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ರೆವೆನ್ಯೂ ಎಸಿ, ಡಿಸಿ ನ್ಯಾಯಾಲಯಗಳಲ್ಲಿ ನಡೆಯುವ ಕಂದಾಯ ಪ್ರಕರಣಗಳಲ್ಲಿ ಬೇರೆ ಬೇರೆ ರೀತಿಯ ಒತ್ತಡಗಳು ಮತ್ತು ವಿಳಂಬದ ಕಾರಣ ಸರಿಯಾದ ರೀತಿಯಲಿ ವಿಚಾರಣೆ ನಡೆಯದೆ ಸಕ್ರಮವಾದ ತೀರ್ಪುಗಳು ಆಗದೆ ಇರುವದರಿಂದ ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು. ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು.
ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು ಹಾಗೂ ಈಗಿರುವ ಅನುದಾನಿತ & ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರ್ಕಾರ ನಿಯಂತ್ರಣ ಮಾಡಬೇಕು. ಹಾಲಿ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಛೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು. ವಕೀಲರ ಸಂಘದ/ ಪರಿಷತ್ತಿನ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿತ್ಯ ನೀಡಬೇಕು ಎಂದು ವಕೀಲರಿಂದ ಸಹಿ ಸಂಗ್ರಹಿಸಿದ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಮತ್ತು ರಾಜ್ಯ ವಕೀಲರ ಪರಿಷತ್ತು ಈ ಬೇಡಿಕೆಗಳನ್ನು ಒಂದು ತಿಂಗಳೊಳಗಾಗಿ ಈಡೇರಿಸದೆ ಇದ್ದಲ್ಲಿ ವಕೀಲರಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಿ ತಮ್ಮ ನಡೆಯನ್ನು ವಿಧಾನಸೌಧ ಮತ್ತು ವಕೀಲರ ಪರಿಷತ್ಗಳ ಕಡೆ ನಡೆಸಬೇಕಾಗುತ್ತದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಯಚೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು. ಹೋರಾಟವನ್ನು ಉದ್ದೇಶಿಸಿ AILU ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶಶಿಧರಗೌಡ ಕೆಲ್ಲೂರು, ಕಾರ್ಯದರ್ಶಿ ಜಿ.ಎಸ್. ವೀರಭದ್ರಪ್ಪ, ಮುಖಂಡರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಯಚೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ಖಜಾಂಚಿ ಸೈಯದ್ ನವಾಜ್ ಪಾಷ, ವಕೀಲರಾದ ಈರಮ್ಮ, ರೇಣುಕಾ, ಶಾಂತಿಕುಮಾರಿ, ಶಾಂತಾ ನಾಯಕ, ಗಾಯಿತ್ರಿ, ಸೌಮ್ಯ, ಶಶಿಕಲಾ,ತೇಜಸ್ವಿನಿ, ಆಶಾ ಜ್ಯೋತಿ, ದೀಪಿಕಾ ಪಾಟೀಲ್, ಉಮಾ, ಸುಷ್ಮಾ ಪಾಟೀಲ್, ಬನಶಂಕರಿ, ರೋಹಿಣಿ, ಜೈ ನೀಲಕಂಠ ರಾವ್, ಎಚ್. ದೊಡ್ಡಪ್ಪ, ಲಕ್ಷ್ಮೀಕಾಂತ್, ಹನುಮಂತಪ್ಪ, ತಾಯಪ್ಪ ಭಂಡಾರಿ, ಕೆ, ಪ್ರಹ್ಲಾದ್ ರಾವ್, ಗೌರೀಶ್ ಸ್ವಾಮಿ, ಮಹಾದೇವ, ಮಲ್ಲಪ್ಪ ಚೆನ್ನಪ್ಪ, ರವೀಂದ್ರ, ಮಲ್ಲೇಶಪ್ಪ, ಗೋಪಾಲ ಕೃಷ್ಣ, ಚಂದ್ರ ಮಗಳಿ, ಶ್ರೀಕಾಂತ್, ಶೊಯಬ್, ಪಣಿಶ್ರೀ, ಬಸವನಗೌಡ, ಆಂಜನೇಯ, ಸುನೀಲ್, ಚೇತನ್, ಸಾಗರ್, ಜಯಪಾಲ್, ರಾಮಪ್ಪ, ಮೌನೇಶ್, ಓಂಕಾರ್ ಯಾದವ್, ಸಂತಾನ ಸೇರಿದಂತೆ ಅನೇಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್