ಬೆಂಗಳೂರು, 3 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಉತ್ತಮ ಕಾರ್ಯಕ್ರಮಗಳ ಯೋಜನೆ ಹಾಗೂ ಅನುಷ್ಠಾನದಲ್ಲಿ ದತ್ತಾಂಶಗಳ ಪಾತ್ರ ಬಹಳಷ್ಟು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ನಿಖರ ದತ್ತಾಂಶಗಳ ಕ್ರೋಢೀಕರಣಕ್ಕೆ ಆದ್ಯತೆ ನೀಡುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್. ಭೋಸರಾಜು ಕರೆ ನೀಡಿದರು.
ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಕೇಂದ್ರ ಜಲಶಕ್ತಿ ಮಂತ್ರಾಲಯ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯಿಂದ ಆಯೋಜಿಸಲಾಗಿದ್ದ 7 ನೇ ಸಣ್ಣ ನೀರಾವರಿ ಮತ್ತು 2 ನೇ ನೀರಿನಾಸರೆಗಳ ಗಣತಿಯ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
1986 ರಲ್ಲಿ ಕೇಂದ್ರ ಸರಕಾರ ಜಲಶಕ್ತಿ ಮಂತ್ರಾಲಯದ ಅಡಿಯಲ್ಲಿ ಈ ಗಣತಿಯನ್ನು ಪ್ರಾರಂಭಿಸಿದೆ. ಪ್ರತಿ 5 ವರ್ಷಗಳಿಗೊಮ್ಮೆ ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಗಣತಿಯನ್ನು ನಡೆಸಲಾಗುತ್ತದೆ. ಈಗಾಗಲೇ 6 ಬಾರಿ ಗಣತಿಯನ್ನು ನಡೆಸಲಾಗಿದ್ದು, ಇಂದು 7 ನೇ ಬಾರಿ ಗಣತಿಗಾಗಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಸಣ್ಣ ನೀರಾವರಿ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳ ಮೂಲಕ ಈ ಗಣತಿಯನ್ನು ನಡೆಸಲಾಗುತ್ತದೆ. ತಂತ್ರಜ್ಞಾನ ಬಳಕೆಯ ಮೂಲಕ ನಡೆಸಲಾಗುವ ಈ ಗಣತಿಯಲ್ಲಿ ಕೊಳವೆ ಬಾವಿಗಳು, ಕೆರೆಗಳು ಸೇರಿದಂತೆ ಎಲ್ಲಾ ಜಲಮೂಲಗಳ ಮಾಹಿತಿಯನ್ನು ಕ್ರೋಢೀಕರಿಸಲಾಗುತ್ತದೆ. ಯಾವುದೇ ಮಾಹಿತಿಯೂ ತಪ್ಪಿಹೋಗದಂತೆ ಗಣತಿ ಕಾರ್ಯವನ್ನು ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa