ಗದಗ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ಕಾಶ್ಮೀರದ ಪಹಲ್ಗಾಂದಲ್ಲಿ ಯಾತ್ರಿಕರ ಮೇಲೆ ಉಗ್ರರಿಂದ ನಡೆದ ಗುಂಡಿನ ದಾಳಿ ಅತ್ಯಂತ ಖಂಡನೀಯವಾದುದು. ಅನೇಕ ಅಮಾಯಕರು ಈ ಗುಂಡಿನ ದಾಳಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ಈ ಘಟನೆ ಅಮಾನವೀಯವಾದುದು. ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಧರ್ಮದ ಹೆಸರಿನಲ್ಲಿ ನಡೆಯುವ ಇಂತಹ ಹೀನ ಕೃತ್ಯಗಳನ್ನು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಖಂಡಿಸುವುದಲ್ಲದೆ ಭಯೋತ್ಪಾದಕರ ವಿರುದ್ಧ ನಡೆವ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲವಾಗಿ ನಿಲ್ಲಬೇಕೆಂದು ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಶ್ರೀಗಳು ಭಯೋತ್ಪಾದನೆಯನ್ನು ಮಟ್ಟಹಾಕಲು ಸರಕಾರ ಉಗ್ರಕ್ರಮಗಳನ್ನು ಕೈಕೊಳ್ಳಬೇಕು. ಕಾಶ್ಮೀರದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಬೇಕೆಂಬುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮನೋಗತವಾಗಿದೆ. ಈ ದಿಶೆಯಲ್ಲಿ ಭಾರತ ಸರಕಾರ ಕೈಕೊಳ್ಳುವ ಎಲ್ಲ ಕಾನೂನಾತ್ಮಕ ಕ್ರಮಗಳಿಗೆ ಭಾರತೀಯರೆಲ್ಲರೂ ಬೆಂಬಲವಾಗಿ ನಿಲ್ಲುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿರುವ ಶ್ರೀಗಳು ರಣಹೇಡಿಗಳಾದ ಉಗ್ರರ ಈ ಹೀನ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಉಗ್ರರ ಈ ದಾಳಿಯಲ್ಲಿ ಹತರಾದ ಎಲ್ಲರಿಗೂ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ ಮತ್ತು ಅವರ ಪರಿವಾರದ ಎಲ್ಲ ಸದಸ್ಯರಿಗೆ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP