ಕೋಲಾರ, ೨೪ ಏಪ್ರಿಲ್ (ಹಿ.ಸ) ಆಂಕರ್ : ನಟಸಾರ್ವಭೌಮ ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿ. ಇವರು ಎಷ್ಟೇ ಎತ್ತರಕ್ಕೇರಿದರೂ ರಾಜಕೀಯ ಪ್ರವೇಶ ಮಾಡಲಿಲ್ಲ. ಕನ್ನಡ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಟಿ. ಸುಬ್ಬರಾಮಯ್ಯ ಹೇಳಿದರು.
ಕೋಲಾರ ನಗರದ ಕುವೆಂಪು ಉದ್ಯಾನವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಯಿಂದ ಹಮ್ಮಿಕೊಂಡಿದ್ದ ಡಾ. ರಾಜಕುಮಾರ್ ರವರ ೯೬ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಪಡೆದು ಕನ್ನಡ ಕೀರ್ತಿಯನ್ನು ಹೆಚ್ಚಿಸಿದ್ದರು ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ೨೦೦ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು. ಇವರು ಅತ್ಯಂತ ಶಿಸ್ತುಬದ್ಧ ಮತ್ತು ಸರಳ ಜೀವನ ಶೈಲಿಗೆ ಹೆಸರುವಾಸಿಯಾಗಿದ್ದರು. ರಾಜಕುಮಾರ್ ರವರು ಯೋಗ, ಪ್ರಾಣಯಾಮ ಹಾಗೂ ಕರ್ನಾಟಕ ಸಂಗೀತ ಪ್ರದರ್ಶಕರಾಗಿದ್ದರು ಎಂದರು.
ನಿವೃತ್ತ ಎ.ಎಸ್.ಐ. ಮತ್ತು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರನಾಥ್ ಮಾತನಾಡಿ ರಾಜ್‌ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ೧೯೭೩ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದರು. ೧೯೭೪ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದರು.
ಸ್ವರ್ಣಭೂಮಿ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ಬಿ. ಶಿವಕುಮಾರ್ ಮಾತನಾಡಿ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು. ಡಾ. ರಾಜಕುಮಾರ್ ರವರು ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರ ರಂಗ ಮತ್ತು ರಂಗಭೂಮಿಯ ಮೇರು ನಟ ಎಂದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಸ್ನೇಹ ಜೀವಿ ಚಾಲಕರ ಸಂಘದ ಉಪಾಧ್ಯಕ್ಷ ಶ್ರೀಧರ್, ವಿಜಯ ಉನ್ನತಿ ಸೇವಾ ಟ್ರಸ್ಟಿನ ಮುರಳಿ, ರಮಣ ಮಹರ್ಷಿ ಇಂಗ್ಲೀಷ್ ಶಾಲೆಯ ಆನಂದರೆಡ್ಡಿ, ಬಾಬಾ ವಿದ್ಯಾ ಸಂಸ್ಥೆ ವೇಣು ಸುಂದರಗೌಡ, ವಿಕಲಚೇನತರ ಸಂಸ್ಥೆಯ ಸುಪ್ರಿಮ್, ನಿವೃತ್ತ ಎ.ಎಸ್.ಐ. ಮುನಿಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್