ವೆಲ್ಲಿಂಗ್ಟನ್, 26 ಮಾರ್ಚ್ (ಹಿ.ಸ.) :
ಆ್ಯಂಕರ್ : ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ 1-4 ಅಂತರದಿಂದ ಸೋಲುವ ಮೂಲಕ ತನ್ನ ಸೊಲಿನ ಸರದಿ ಮುಂದುವರೆಸಿದೆ
ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ನಡೆದ ಈ ಸರಣಿಯ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮೈಕಲ್ ಬ್ರೇಸ್ವೆಲ್ ಬೌಲಿಂಗ್ ಆಯ್ದುಕೊಂಡರು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 23 ಆಗುವಷ್ಟರಲ್ಲಿ ಆರಂಭಿಕರಾದ ಮೊಹಮ್ಮದ್ ಹ್ಯಾರಿಸ್ (11) ಹಾಗೂ ಹಸನ್ ನವಾಝ್ (0) ಪೆವಿಲಿಯನ್ ಸೇರಿದ್ದರು. ಆ ಬಳಿಕ ಬಂದ ಒಮೈರ್ ಯೂಸುಫ್ 7 ರನ್ಗಳಿಸಿ ಔಟಾದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಸಲ್ಮಾನ್ ಅಲಿ ಅಘಾ 39 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 51 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿತು.
129 ರನ್ಗಳ ಸುಲಭ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ತಂಡಕ್ಕೆ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭಿಕ ಆಟವಾಡಿದ ಪರಿಣಾಮ ಮೊದಲ 6 ಓವರ್ಗಳಲ್ಲಿ 92 ರನ್ ಗಳಿಸಿತು.
ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಟಿಮ್ ಸೈಫರ್ಟ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಸೈಫರ್ಟ್ ಬ್ಯಾಟ್ನಿಂದ 10 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳು ಮೂಡಿಬಂತು. ಅಲ್ಲದೆ ಕೇವಲ 38 ಎಸೆತಗಳಲ್ಲಿ ಅಜೇಯ 97 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 131 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಸಾಧಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ 4-1 ಅಂತರದಿಂದ ಸರಣಿ ಗೆದ್ದುಕೊಂಡಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa