ಕಬ್ಬು ಬೆಳೆಗಾರರ ದಿಕ್ಕು ತಪ್ಪಿಸಲು ಯತ್ನ ; ಮುಖ್ಯಮಂತ್ರಿಗೆ ಸಚಿವ ಪ್ರಲ್ಹಾದ ಜೋಶಿ ಪತ್ರ
ನವದೆಹಲಿ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ತೋರುವುದು ಸರಿಯಲ್ಲ. ʼಇದು ರೈತರನ್ನು ದಿಕ್ಕು ತಪ್ಪಿಸುವ ಅನ್ಯಾಯದ ಕ್ರಮʼವೆಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ
Letter


Joshi letter


ನವದೆಹಲಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ತೋರುವುದು ಸರಿಯಲ್ಲ. ʼಇದು ರೈತರನ್ನು ದಿಕ್ಕು ತಪ್ಪಿಸುವ ಅನ್ಯಾಯದ ಕ್ರಮʼವೆಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪತ್ರ ಬರೆದು ಆಕ್ಷೇಪಿಸಿದ್ದಾರೆ.

ರಾಜ್ಯದ ವಿವಿಧೆಡೆ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಖ್ಯಮಂತ್ರಿಗಳು ಕೇಂದ್ರದತ್ತ ಬೆರಳು ತೋರಿ ಕಬ್ಬು ಬೆಳೆಗಾರರ ಹಿತರಕ್ಷಣೆಯಿಂದ ನುಣುಚಿಕೊಳ್ಳುವುದು ತರವಲ್ಲ. ಪ್ರಧಾನಿ ಮೋದಿ ಸರ್ಕಾರ ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದ್ದು, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಹಿತರಕ್ಷಣೆಗೆ ಹಿಂದೆಂದಿಗಿಂತಲೂ ಒಳ್ಳೇ ಕ್ರಮಗಳನ್ನೇ ಕೈಗೊಂಡಿದೆ ಎಂದು ವಿಸ್ತ್ರತವಾಗಿಯೇ ವಿವರಣೆ ನೀಡಿದ್ದಾರೆ.

ಕಬ್ಬಿನ ಬಾಕಿ ಶೂನ್ಯಕ್ಕೆ:

ಹಿಂದೆಲ್ಲಾ ಕಬ್ಬಿನ ಬಾಕಿ ಪಾವತಿಗಾಗಿ ರೈತರು ಹೋರಾಟ ನಡೆಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಳೆಗಾರರ ಸಂಕಷ್ಟ ಪರಿಸ್ಥಿತಿ ಅರಿತು ಇದನ್ನು ನಿವಾರಿಸಿದೆ. ಈಗ ಕಬ್ಬು ಬಾಕಿಯನ್ನು ಶೂನ್ಯಕ್ಕೆ ತಂದಿದೆ. 2022-23 ಮತ್ತು 2023-24ರ ಸಕ್ಕರೆ ಹಂಗಾಮಿಗೆ ಕೇಂದ್ರ ಸರ್ಕಾರದಿಂದ ಕಬ್ಬಿನ ಬಾಕಿ ಶೂನ್ಯವಾಗಿದೆ. 2024-25ಕ್ಕೆ ಸುಮಾರು ₹50 ಲಕ್ಷ ಬಾಕಿ ಇದೆಯಷ್ಟೇ. ವಾಸ್ತವ ಹೀಗಿರುವಾಗ ತಾವು ಕೇಂದ್ರದತ್ತ ಬೆರಳು ತೋರುವುದು ಅನ್ಯಾಯದ ಪ್ರತೀಕ ಮತ್ತು ರೈತರನ್ನು ದಿಕ್ಕು ತಪ್ಪಿಸುವ ಕ್ರಮವಾಗಿದೆ ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ.

₹16500 ಕೋಟಿ ಆರ್ಥಿಕ ನೆರವು:

ಕಬ್ಬು ಬೆಳೆಗಾರರಿಗೆ ಸಕಾಲಿಕ ಪಾವತಿಗೆ ಅನುಕೂಲವಾಗಲೆಂದೇ ಕೇಂದ್ರ ಸರ್ಕಾರ ವಿವಿಧ ರೀತಿಯಲ್ಲಿ ನೆರವಾಗಿದೆ. 2014-15ರಿಂದ 2020-21ರ ಅವಧಿಯಲ್ಲಿ ವಿವಿಧ ಯೋಜನೆಗಳಡಿ ರೈತರ ಕಬ್ಬಿನ ಬಾಕಿ ಪಾವತಿಸಲು ಅನುವಾಗುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು ₹16,500 ಕೋಟಿ ಆರ್ಥಿಕ ನೆರವನ್ನು ಒದಗಿಸಿದೆ ಎಂದು ಗಮನ ಸೆಳೆದಿದ್ದಾರೆ.

FRP ₹355 ಕ್ವಿಂಟಲ್‌ ದರ:

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸು ಮೇರೆಗೆ ಕೇಂದ್ರ ಸರ್ಕಾರ ಪ್ರತಿ ಸಕ್ಕರೆ ಹಂಗಾಮಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನೇ ನಿಗದಿಪಡಿಸುತ್ತದೆ. ಕಬ್ಬು ಬೆಳೆಯುವ ಎಲ್ಲಾ ರಾಜ್ಯಗಳಿಗೂ ಅನ್ವಯಿಸಿ 2025-26ರಲ್ಲಿ ಉತ್ಪಾದನಾ ವೆಚ್ಚ ಒಳಗೊಂಡಂತೆ FRP ₹355 ಕ್ವಿಂಟಲ್‌ ದರದಲ್ಲಿ ಅನುಮೋದಿಸಿದೆ. ಮತ್ತಿದು ಉತ್ಪಾದನಾ ವೆಚ್ಚಕ್ಕಿಂತ ಶೇ.105.2ರಷ್ಟು ಮಾರ್ಜಿನ್‌ ಆಗಿರುತ್ತದೆ.

FRP ದರದಲ್ಲಿ ಗಮನಾರ್ಹ ಏರಿಕೆ:

ಕಳೆದ ದಶಕದಿಂದ FRPಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2013-14ರಲ್ಲಿ ₹210 ಇದ್ದ FRP ದರ ಇದೀಗ ₹355ಕ್ಕೇರಿದೆ. ಇದು ಈ ವರ್ಷದಲ್ಲಾದ ಬಲವಾದ ಏರಿಕೆ. ಅಲ್ಲದೇ, ಶೇ.0.1ರಷ್ಟು ಚೇತರಿಕೆಗೆ ರೈತರು ಪ್ರತಿ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ₹3.46 ಪಡೆಯುತ್ತಾರೆ. ಕರ್ನಾಟಕದಲ್ಲಿ ಸರಾಸರಿ ಶೇ.10.5ರಷ್ಟು ಚೇತರಿಕೆಯೊಂದಿಗೆ ಪ್ರತಿ ಕ್ವಿಂಟಲ್‌ಗೆ FRP ₹363 ಆಗಿದೆ.

ಕಬ್ಬು ಖರೀದಿ ಮೌಲ್ಯ ಶೇ.80ರಷ್ಟು ಹೆಚ್ಚಳ: 2013-14ರಿಂದ 2024-25ರ ಅವಧಿಯಲ್ಲಿ ಕಬ್ಬು ಖರೀದಿ ಮೌಲ್ಯ ಶೇ.80ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದರ ಮೌಲ್ಯ 1,02,687 ಕೋಟಿ ಆಗಿತ್ತು. ಕೇಂದ್ರ ಸರ್ಕಾರ ನಿಗದಿಪಡಿಸಿದ FRP ದರದಂತೆ ಸಕ್ಕರೆ ಕಾರ್ಖಾನೆಗಳು 14 ದಿನಗಳಲ್ಲಿ ರೈತರಿಗೆ ಸಕಾಲಿಕವಾಗಿ ಕಬ್ಬಿನ ವೆಚ್ಚ ಪಾವತಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ 1966ರ ಕಬ್ಬು ನಿಯಂತ್ರಣ (ಆದೇಶ) ನಿಬಂಧನೆ ಜಾರಿಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.

ಎಸ್ಎಪಿ ಘೋಷಿಸಲು ಸಲಹೆ:

ರಾಜ್ಯದ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರದತ್ತ ಬೆರಳು ತೋರುತ್ತಿರುವ ರಾಜ್ಯ ಸರ್ಕಾರ SAP (ರಾಜ್ಯ ಸಲಹಾ ಬೆಲೆ) ಘೋಷಿಸಲಿ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಹರಿಯಾಣದಂತೆ ಇಲ್ಲೂ SAP ಘೋಷಿಸಬಹುದೆಂದು ಸಚಿವ ಪ್ರಲ್ಹಾದ ಜೋಶಿ ಸಿಎಂಗೆ ಬರೆದ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಎಥೆನಾಲ್‌ಗೆ ಕಬ್ಬು ಬಳಸಲು ಉತ್ತೇಜನ: ಹೆಚ್ಚುವರಿ ಕಬ್ಬನ್ನು ಎಥೆನಾಲ್‌ಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ಪ್ರೋತ್ಸಾಹಿಸುತ್ತಿದೆ. 2013ರವರೆಗೆ OMC ಗಳಿಗೆ ಕೇವಲ 38 ಕೋಟಿ ಲೀಟರ್ ಎಥೆನಾಲ್ ಪೂರೈಕೆಯಾಗಿತ್ತು. ಆಗ ಮಿಶ್ರಣ ಮಟ್ಟ ಕೇವಲ ಶೇ.1.53ರಷ್ಟಿತ್ತು. ಇದೀಗ ಶೇ.20ರಷ್ಟು ಮಿಶ್ರಣದೊಂದಿಗೆ ಸುಮಾರು 1001 ಕೋಟಿ ಲೀಟರ್‌ಗೆ ಏರಿದೆ.

ರಾಜ್ಯದಲ್ಲಿ ಎಥೆನಾಲ್‌ ಡಿಸ್ಟಿಲರಿ ಸ್ಥಾಪನೆಗೆ ನೆರವು:

ಕರ್ನಾಟಕದಲ್ಲಿ ಎಥೆನಾಲ್ ಡಿಸ್ಟಿಲರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ʼಎಥೆನಾಲ್ ಬಡ್ಡಿ ಸಬ್ವೆನ್ಷನ್ʼ ಯೋಜನೆಯಡಿ ₹435.42 ಕೋಟಿ ಆರ್ಥಿಕ ನೆರವು ನೀಡಿದೆ. ಕರ್ನಾಟಕದ ಡಿಸ್ಟಿಲರಿಗಳಿಗೆ ಎಥೆನಾಲ್ ಹಂಚಿಕೆ ESY 2022-23ರಲ್ಲಿ 85 ಕೋಟಿ ಲೀಟರ್‌ಗಳಿಂದ ESY 2025-26ರಲ್ಲಿ 133 ಕೋಟಿ ಲೀಟರ್‌ಗೆ ಹೆಚ್ಚಾಗಿದೆ. ಇದು ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯದ ಹರಿವನ್ನು ಒದಗಿಸಿದೆ ಎಂದಿದ್ದಾರೆ.

15 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಿಗೆ ಅವಕಾಶ:

ಹೆಚ್ಚುವರಿ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. 10 ಲಕ್ಷ ಮೆಟ್ರಿಕ್‌ ಟನ್‌ನಿಂದ 15 ಲಕ್ಷ ಮೆಟ್ರಿಕ್‌ ಟನ್‌ ರಫ್ತಿಗೆ ಅವಕಾಶ ನೀಡಲು ನಿರ್ಧರಿಸಿದೆ. ಅಲ್ಲದೇ, ಮೊಲಾಸಸ್ ಮೇಲಿನ ಶೇ.50ರಷ್ಟು ರಫ್ತು ಸುಂಕವನ್ನು ತೆಗೆದುಹಾಕಿ ನೆರವು ಕಲ್ಪಿಸಿದೆ. ಹೀಗೆ ಕೇಂದ್ರ ಸರ್ಕಾರ ರೈತರು ಮತ್ತು ಸಕ್ಕರೆ ಉದ್ಯಮ ಎರಡನ್ನೂ ಬೆಂಬಲಿಸುವ ನಿಟ್ಟಿನಲ್ಲಿ ಸಮತೋಲಿತವಾಗಿ ಸ್ಪಂದಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖ್ಯಮಂತ್ರಿಗೆ

ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande