
ಗದಗ, 22 ನವೆಂಬರ್ (ಹಿ.ಸ.) :
ಆ್ಯಂಕರ್ : ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಮುಂಡರಗಿ ತಾಲೂಕಿನ ಭೂಮಿ ತಾಯಿ ಹಸಿರು ಸೀರೆ ಉಡಬೇಕು ಎನ್ನುವುದು ನನ್ನ ಕನಸು ಅದನ್ನು ನನಸು ಮಾಡುವ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ದೇವಸ್ಥಾನದ 18 ನೇಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದುಕೊಂಡು ಮಾತನಾಡಿದರು.
ತಾವೆಲ್ಲ ಹೊಸ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡುತ್ತಿದ್ದೀರಿ. ನಿಮ್ಮ ಬದುಕಿನಲ್ಲಿ ಒಳ್ಳೆಯದಾಗಲಿ ಯಾವಾಗಲೂ ಬೆಳಕಿರಲಿ, ವೀರಭದ್ರ ಸೇವಾ ಸಂಸ್ಥೆಯವರು ಪ್ರತಿ ವರ್ಷ ಸಾಮೂಹಿಕ ವಿವಾಹ ಮಾಡುತ್ತಿದ್ದಾರೆ. ಮುಂದಿನ ವರ್ಷ ನೀವು ಸಾಮೂಹಿಕ ವಿವಾಹಕ್ಕೆ ಬರಬೇಕು ಎಂದು ಹೇಳಿದರು.
ಪರಮಪೂಜ್ಯರ ಪೂಜಾ ಫಲದಿಂದ ಮುಂಡರಗಿ ತಾಲೂಕು ಪಾವನವಾಗಿದೆ. ಶಿಕ್ಷಣ ಇಲ್ಲದ ಸಂದರ್ಭದಲ್ಲಿ. ಶಿಕ್ಷಣ ಕೊಟ್ಟು ದೊಡ್ಡ ಸೇವೆ ಮಾಡಿದ್ದಾರೆ. ಮುಂಡುರಗಿ ತಾಲೂಕು ಒಂದು ಕಾಲದಲ್ಲಿ ಹಿಂದುಳಿದ ತಾಲೂಕು ಆಗಿತ್ತು. ಎಸ್. ಎಸ್. ಪಾಟೀಲರು ಸಚಿವರಾದ ಮೇಲೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಕರ್ನಾಟಕದಲ್ಲಿ ಈ ತಾಲೂಕು ಎಲ್ಲಿದೆ ಅಂತ ತೋರಿಸಿಕೊಟ್ಟವರು ಎಸ್.ಎಸ್. ಪಾಟೀಲರು, ಇಲ್ಲಿ ತುಂಗಭದ್ರೆ ಹರಿದಿದ್ದಾಳೆ. ಇಡೀ ತಾಲೂಕನ್ನು ನೀರಾವರಿ ಮಾಡಬೇಕಿತ್ತು. ನಾನು ನೀರಾವರಿ ಸಚಿವನಾಗಿದ್ದಾಗ ಸಿಂಗಟಾಲೂರು ಯೋಜನೆಗೆ 1 ಸಾವಿರ ಕೋಟಿ ರೂ. ಕೊಟ್ಟು ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದ್ದೇವೆ. ಬಲದಂಡೆ ಭಾಗದಲ್ಲಿ ಬಳ್ಳಾರಿ ಭಾಗದಲ್ಲಿ ಸಾಕಷ್ಟು ನೀರಾವರಿ ಆಗಿದೆ. ಸುಮಾರು 50 ಸಾವಿರ ಎಕರೆ ನೀರಾವರಿ ಆಗಿದೆ. ಮುಂಡರಗಿ ತಾಲೂಕಿನಲ್ಲಿ ಈ ಭಾಗದಲ್ಲಿ ಮೈಕೋ ಇರಿಗೇಷನ್ ಯೋಜನೆ ಮಾಡಿದರೂ, ಅದು ಬಹಳ ಮಂದಗತಿಯಲ್ಲಿ ನಡೆಯುತ್ತಿದೆ. ಮೇನ್ ಬ್ರಾಂಚ್ ಕೆನಾಲ್ ಕಾಮಗಾರಿ ಮುಗಿದರೂ ಹೊಲಗಳಿಗೆ ಕೊನೆ ಹಂತದ ರೈತರಿಗೆ ನೀರು ಬರುತ್ತಿಲ್ಲ. ಈಗಿನ ಸರ್ಕಾರ ಕೂಡಲೆ ಆಸಕ್ತಿ ವಹಿಸಿ ಮಾಡಬೇಕು ಎಂದು ಆಗ್ರಹಿಸಿದರು.
ಸಿಂಗಟಾಲೂರಿನ ನೀರಿನ ಹಂಚಿಕೆಯನ್ನು ನ್ಯಾಯಮಂಡಳಿಯಲ್ಲಿ ಸಂಪೂರ್ಣವಾಗಿ ದೃಢ ಪಡಿಸಿದ್ದೇವೆ.
2004-05 ನೀರಿನ ಹಂಚಿಕೆ ಮಾಡಿರಲಿಲ್ಲ. ನಾನು ನೀರಾವರಿ ಸಚಿವನಾದ ಮೇಲೆ ನೀರಿ ಹಂಚಿಕೆ ದೃಢ ಪಡಿಸಿ, ನೀರಿನ ಪ್ರಮಾಣ ಹೆಚ್ಚಿಗೆ ಮಾಡಿದ್ದೇವೆ. ಹೀಗಾಗಿ ಈ ಭಾಗದಲ್ಲಿ ನೀರು ಕೊಡಲು ಸಾಧ್ಯವಾಗಿದೆ. ಇದರಿಂದ ಸುಮಾರು 18 ಟಿಎಂಸಿ ನೀರು ಕೊಡಲು ಸಾಧ್ಯವಾಗಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಈ ಕೆಲಸ ಆಗಿದೆ. ಮೈಕೊ ಇರಿಗೇಷನ್ ಸಂಪೂರ್ಣ ಯಶಸ್ವಿಯಾಗಬೇಕೆಂದರೆ ಮಧ್ಯ ಪ್ರದೇಶದಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ಅದನ್ನು ಮುಂಡರಗಿ ತಾಲೂಕಿನಲ್ಲಿ ಜಾರಿಗೆ ತಂದರೆ ಎಲ್ಲ ರೈತರಿಗೂ ನೀರಾವರಿ ಒದಗಿಸಬಹುದು. ಈ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಈ ಏತ ನೀರಾವರಿಯನ್ನು ಬರುವಂತಹ ದಿನಗಳಲ್ಲಿ ಪೂರ್ಣಗೊಳಿಸಿ ರೈತರ ಹೊಲಕ್ಕೆ ನೀರು ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಂಡರಗಿ ತಾಲೂಕಿನ ಭೂಮಿ ತಾಯಿ ಹಸಿರು ಸೀರೆ ಉಡಬೇಕು ಎನ್ನುವುದು ನನ್ನ ಕನಸು ಅದನ್ನು ನನಸು ಮಾಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಗದಗ ಹರಪನಹಳ್ಳಿ ರೈಲ್ವೆ ಲೈನ್ ಬಗ್ಗೆ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಅದನ್ನು ವೇಗವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸುವ ಕೆಲಸ ಮಾಡುತ್ತೇನೆ. ಬರುವಂತಹ ದಿನಗಳಲ್ಲಿ ಮುಂಡರಗಿ ತಾಲೂಕು ಅಭಿವೃದ್ಧಿ ಹೊಂದಿದ ತಾಲೂಕನ್ನಾಗಿ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನ ಮಠ, ಮುಂಡರಗಿ, ಶ್ರೀ ಡಾ.ಚೆನ್ನಮಲ್ಲ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ, ಶಾಸಕರಾದ ಡಾ.ಚಂದ್ರು ಲಮಾಣಿ, ಕೆ.ಸಿ.ಸಿ ಬ್ಯಾಂಕ ಅಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ, ಮುಖಂಡರಾದ ಕರಬಸಪ್ಪ ಹಂಚಿನಾಳ, ಲಿಂಗನಗೌಡ ಪಾಟೀಲ, ಸಣ್ಣವೀರಪ್ಪ ಹಳ್ಳೆಪ್ಪನವರ, ಶಿವಪ್ರಕಾಶ ಮಹಾಜನಶೆಟ್ಟರ ಹಾಗೂ ವೀರಭದ್ರೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಸಂಗಪ್ಪ ಲಿಂಬಿಕಾಯಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP