

ರಾಯಚೂರು, 20 ನವೆಂಬರ್ (ಹಿ.ಸ.) :
ಆ್ಯಂಕರ್ : 4000 ರಾಸಾಯನಿಕಗಳನ್ನು ಹೊಂದಿರುವ ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಬಳಸದೆ ಇರಲು ಎಲ್ಲರೂ ತೀರ್ಮಾನಿಸುವ ಮೂಲಕ ಸದೃಢ ಯುವ ಸಮುದಾಯವನ್ನು ರೂಪಿಸಲು ಮುಂದೆ ಬನ್ನಿ ಎಂದು ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗುಂಡಮ್ಮ ಅವರು ಕಾಲೇಜು ವಿದ್ಯಾರ್ಥಿಗಳಿಗೆ ವಿನಂತಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರವರ ಸಹಯೋಗದಲ್ಲಿ ರಾಯಚೂರು ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 3.0 ಅಡಿಯಲ್ಲಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಂಬಾಕು ಸೇವೆನೆಯು ಗಂಭೀರವಾದ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್, ಹೃದಯ ರೋಗ, ಶ್ವಾಸಕೋಶದ ತೊಂದರೆಗಳು, ಹಲ್ಲಿನ ಸಮಸ್ಯೆಗಳು ಮತ್ತು ಫಲವತ್ತತೆಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್. ದಾಸಪ್ಪನವರ ಅವರು ಮಾತನಾಡಿ ಬೀಡಿ, ಸಿಗರೇಟ್, ಹುಕ್ಕಾ ಮುಂತಾದವುಗಳನ್ನು ಬಳಸುವವರ ಒಡನಾಡಿಗಳಿಗೆ, ಕುಟುಂಬದ ಸದಸ್ಯರಿಗೆ ಹಾಗೂ ಬೀಡಿ ಸಿಗರೇಟ್ ಸೇದುವುದಕ್ಕಾಗಿಯೇ ಕೆಲವು ಅಂಗಡಿಗಳನ್ನು ಗುರ್ತಿಸಿಕೊಳ್ಳುವ ಅಂಗಡಿಗಳ ಮಾಲೀಕರಿಗೂ ಸಹ ಪರೋಕ್ಷ ಧೂಮಪಾನದ ಮೂಲಕ ಹೆಚ್ಚು ಹಾನಿಯುಂಟಾಗುತ್ತದೆ. ಮತ್ತು ಅಕಾಲಿಕ ಸಾವುಗಳಿಗೆ ಕಾರಣವಾಗುತ್ತದೆ. ತಂಬಾಕಿನ ಬಳಕೆಯಿಂದಾಗಿ ಕ್ಯಾನ್ಸರ್ ಸೇರಿದಂತೆ ದೇಹದ ಬಹುತೇಕ ಎಲ್ಲಾ ಅಂಗಾಂಗಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ಪುರುಷರಲ್ಲಿ ವಿಕೃತ ವಿರ್ಯಾಣು ಉತ್ಪಾದನೆ, ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಮೂಲಕ ಸಂತಾನಭಿವೃದ್ದಿಗೆ ಮಾರಕವಾಗುತ್ತವೆ. ಈ ದಿಶೆಯಲ್ಲಿ ಯುವಜನತೆ ಇಂದಿನಿಂದಲೆ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಾಗಲು ಮನವಿ ಮಾಡಿದರು.
ಪ್ರತಿಜ್ಞೆ : ಉಪನ್ಯಾಸಕರಾದ ಗೋವರ್ಧನ ರೆಡ್ಡಿ ನಶೆ ಮುಕ್ತ ಭಾರತ ಅಡಿಯಲ್ಲಿ ಮಾದಕ, ಪದಾರ್ಥ, ತಂಬಾಕು ಬಳಕೆ ತ್ಯಜಿಸುವ ಕುರಿತು ಪ್ರತಿಜ್ಞೆ ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ರವೀಂದ್ರ ಎಸ್ ಬಂಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ., ಉಪನ್ಯಾಸಕರಾದ ಗೋವರ್ಧನ ರೆಡ್ಡಿ, ಮಲ್ಲಮ್ಮ ಮೇಟಿ, ಮೆಹಬೂಬ್, ವೆಂಕನಗೌಡ, ಪಿಹೆಚ್‌ಸಿಓ ರೇಣುಕಾ, ಆಶಾ ಕಾರ್ಯಕರ್ತೆ ಅರುಣ, ವಿಮಲ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್