
ನವದೆಹಲಿ, 18 ನವೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್‌ಬಾಂಬ್ ಸ್ಫೋಟದ ತನಿಖೆಯನ್ನು ವೇಗಗೊಳಿಸಿರುವ ಹಿನ್ನೆಲೆಯಲ್ಲಿ, ಜಾರಿ ನಿರ್ದೇಶನಾಲಯ ಇಂದು ಬೆಳಗ್ಗೆ ಭಾರಿ ಮಟ್ಟದ ಶೋಧ ಕಾರ್ಯಾಚರಣೆ ನಡೆಸಿದೆ.
ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕಚೇರಿಗಳು, ಟ್ರಸ್ಟಿಗಳು ಮತ್ತು ಸಂಪರ್ಕಿತ ಸಂಸ್ಥೆಗಳು ಸೇರಿದಂತೆ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಳಗ್ಗೆ 5 ಗಂಟೆಯಿಂದಲೇ ಓಖ್ಲಾ, ಫರಿದಾಬಾದ್ ಮತ್ತು ದೆಹಲಿ–ಎನ್‌ಸಿಆರ್‌ನ ಅನೇಕ ಪ್ರದೇಶಗಳಲ್ಲಿ ಇಡಿ ತಂಡಗಳು ಶೋಧ ಕಾರ್ಯ ಆರಂಭಿಸಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ನಡೆಯುತ್ತಿರುವ ಈ ಕ್ರಮ, ಅಲ್-ಫಲಾಹ್ ಟ್ರಸ್ಟ್ ಮೇಲಾಗಿರುವ ಆರ್ಥಿಕ ಅಕ್ರಮ ಮತ್ತು ಅನುಮಾನಾಸ್ಪದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದೆ.
ಈ ಹಿಂದೆ, ಇಡಿಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯ ಮತ್ತು ಅದರ ನಿರ್ದೇಶಕರ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು, ಇದೀಗ ಆ ಪ್ರಕರಣದ ಮುಂದುವರೆದ ಭಾಗವಾಗಿ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಹಣಕಾಸು ವ್ಯವಹಾರಗಳ ವಿವರಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa