

ಬಳ್ಳಾರಿ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಅಕ್ರಮ ದತ್ತು ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ವಿಶೇಷ ದತ್ತು ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ‘ವಿಶೇಷ ಚೇತನ ಮಕ್ಕಳ ದತ್ತು ಪ್ರಕ್ರಿಯೆ’ ಘೋಷವಾಕ್ಯದಡಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅಜಾದ್ ವಸತಿ ಶಾಲೆಯಲ್ಲಿ ಸೋಮವಾರ ನಡೆದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಜೀವ ಅತಿ ಅಮೂಲ್ಯವಾಗಿದ್ದು, ಯಾವುದೇ ಕಾರಣದಿಂದಾಗಿ ಪೋಷಕರು ನವಜಾತ ಶಿಶುಗಳನ್ನು ಬಿಟ್ಟುಹೋಗಿರುವುದು ಕಂಡುಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಗಮನಕ್ಕೆ ತರಬೇಕು. ಅಂತಹ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡಿ, ಒಳ್ಳೆಯ ಕುಟುಂಬ ಮತ್ತು ಪೋಷಕರಿಗೆ ಮಕ್ಕಳನ್ನು ದತ್ತು ನೀಡುವ ಮೂಲಕ ಅಂತಹ ಮಕ್ಕಳಿಗೆ ಒಳ್ಳೆಯ ಜೀವನ ನೀಡಲು ಸಾಧ್ಯ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭಧ್ರದೇವಿ ಅವರು, ಮಕ್ಕಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಕ್ಕಳನ್ನು ಬಾಲ್ಯವಿವಾಹ, ಬಾಲಕಾರ್ಮಿಕ, ಭಿಕ್ಷಾಟನೆ, ಲೈಂಗಿಕ ಕಿರುಕುಳ ಮತ್ತು ಇನ್ನಿತರೆ ಸಂಕಷ್ಟಕ್ಕೆ ಒಳಗಾದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದುವೇಳೆ ಅಂತಹ ಸಮಸ್ಯೆಗಳು ಎದುರಿಸುತ್ತಿದ್ದರೆ, ಇಲ್ಲವೇ ಕಂಡುಬಂದಲ್ಲಿ ನಿರ್ಭಯವಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, 112 ಗೆ ಕರೆ ಮಾಡಬೇಕು. ಮಾಹಿತಿ ನೀಡಿದವರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಲಲಿತಮ್ಮ ಅವರು, ಹೆಣ್ಣು ಮಕ್ಕಳು ಅಂತರ್ಜಾಲದಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಮತ್ತು ಫೋಟೋಗಳನ್ನು ಹಂಚಿಕೊಳ್ಳಬಾರದು. ಸೈಬರ್ ಕ್ರೈಮ್ ಕುರಿತು ಅರಿವು ಪ್ರತಿಯೊಬ್ಬರೂ ಹೊಂದಬೇಕು ಎಂದು ಹೇಳಿದರು.
ವಸತಿ ಶಾಲೆಯ ಪ್ರಾಂಶುಪಾಲ ಕೆ.ಎಂ. ಮೂಕಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಕ್ಕಳು ಮಕ್ಕಳ ಸಹಾಯವಾಣಿ ಸಂಖ್ಯೆ-1098, ಪೊಲೀಸ್ ಸೇವೆ-112, ಸೈಬರ್ ಕ್ರೈಮ್ -1930 ಮತ್ತು ಉಚಿತ ರಾಷ್ಟ್ರೀಯ ಕಾನೂನು ಸೇವೆಗಳ ಸಂಖ್ಯೆ -15100 ಗಳನ್ನು ನೆನಪಿಟ್ಟುಕೊಂಡು ಅಗತ್ಯ ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ರಕ್ಷಣಾಧಿಕಾರಿ (ಆಸಾಂಸ್ಥಿಕ ಸೇವೆ) ಚನ್ನಬಸಪ್ಪ ಪಾಟೀಲ್ ಅವರು ದತ್ತು ಕುರಿತ ಪ್ರತಿಜ್ಞಾವಿಧಿ ಭೋದಿಸಿದರು.
ಪ್ರಾಂಶುಪಾಲರಾದ ನಾಗಯ್ಯ ಹಿರೇಮಠ, ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್, ಮಕ್ಕಳ ಸಹಾಯವಾಣಿ ಸಂಯೋಜಕ ಕೆ. ಆನಂದ, ಮಿಷನ್ ಶಕ್ತಿ ಸಂಯೋಜಕಿ ಶಹಜಹಾನ್, ದತ್ತು ಸಂಸ್ಥೆಯ ಸಿಬ್ಬಂದಿ ಗಣೇಶ್ ಸೇರಿದಂತೆ ವಸತಿ ಶಾಲೆಯ ಶಿಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ವಸತಿ ನಿಯಲದ 300ಕ್ಕೂ ಹೆಚ್ಚು ಮಕ್ಕಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್