ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನ ಆರಂಭ
ಹಾಸನ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವರ್ಷದಲ್ಲಿ ಒಂದು ಬಾರಿ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ತಳವಾರ ವಂಶಸ್ಥ ನರಸಿಂಹರಾಜು ಬಾಳೆಕ
Hasnambe


ಹಾಸನ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವರ್ಷದಲ್ಲಿ ಒಂದು ಬಾರಿ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆಯಲಾಯಿತು.

ತಳವಾರ ವಂಶಸ್ಥ ನರಸಿಂಹರಾಜು ಬಾಳೆಕಂಬ ಕತ್ತರಿಸಿದ ನಂತರ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮಧ್ಯಾಹ್ನ ಗರ್ಭಗುಡಿ ಬಾಗಿಲು ತೆರೆಯಲಾಯಿತು. ದೇವಿಯ ಪವಾಡವೆಂದು ನಂಬಲಾಗುವ ಗರ್ಭಗುಡಿಯೊಳಗಿನ ನಂದಾದೀಪ ಬೆಳಗುತ್ತಿದ್ದು, ಗರ್ಭಗುಡಿ ತೆರೆದ ಬಳಿಕ ಪೂಜೆ ಕಾರ್ಯ ಆರಂಭವಾಗಿದೆ.

ಇದಕ್ಕೂ ಮುನ್ನ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಅರ್ಚಕರ ತಂಡವು ಮಂಗಳ ವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಜೊತೆ ದೇವಾಲಯಕ್ಕೆ ಆಗಮಿಸಿ, ಗರ್ಭಗುಡಿ ಬಾಗಿಲಿಗೆ ವಿಶೇಷ ಪೂಜೆ ನೆರವೇರಿಸಿದರು.

ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಹೆಚ್.ಪಿ.ಸ್ವರೂಪ್ ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

ಇಂದಿನಿಂದ ಅಕ್ಟೋಬರ್ 23ರವರೆಗೂ ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ. ಆದರೆ, ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ 13 ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದ್ದು, ಭಕ್ತರ ಅನುಕೂಲಕ್ಕಾಗಿ ಟಿಕೆಟ್ ಬುಕಿಂಗ್ ಸೇರಿದಂತೆ ಇತರ ಸೇವೆಗಳನ್ನು ವಾಟ್ಸ್​ಆ್ಯಪ್​ ಮೂಲಕವೇ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ನಾಳೆ ಅಕ್ಟೋಬರ್ ೧೦ರಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರಿಗಾಗಿ ವಿಶೇಷ ಸಾಲು, ವಿಶೇಷ ದರ್ಶನಕ್ಕೆ ಹಣ ಕೊಟ್ಟು ಬರುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ.

ಕಳೆದ ವರ್ಷ 15 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದು, ಈ ಬಾರಿ ಭಕ್ತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ದೇವಾಲಯದ ಸುತ್ತಲು ಬ್ಯಾರಿಕೇಡ್ ಅಳವಡಿಕೆ, ಟೆಂಟ್ ನಿರ್ಮಾಣ, ಸಿಸಿ ಕ್ಯಾಮರಾ ಅಳವಡಿಸಿ ಭಕ್ತರ ಸುರಕ್ಷತೆಗೆ ಕ್ರಮ ಕೈಗೊಂಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande