ವಿಜಯಪುರ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮಾಡಿದ ಎಡವಟ್ಟಿನಿಂದ ರೈತ ಕುಟುಂಬ ಬೀದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕಿದೆ. ಕೂಡಲೇ ನಷ್ಟಗೊಂಡ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ತಾಳಿಕೋಟಿ ತಾಲೂಕಿನ ಶರಣ ಸೋಮನಾಳ ಗ್ರಾಮದ ರೈತರಾದ ಮಂಜುನಾಥ ನಾಟೀಕಾರ ಅವರ ಸರ್ವೇ ನಂಬರ್ ೧೬೩/೩ ಜಮೀನಿನಲ್ಲಿ ೨೦೧೮-೧೯ ಸಾಲಿನಲ್ಲಿ ಮುಳವಾಡ ಏತ ನೀರಾವರಿ ಯೋಜನೆಯಡಿ ವಡವಡಗಿ ಕೆರೆ ನೀರು ತುಂಬುವ ಕಾಮಗಾರಿಯೂ ಸಂಪೂರ್ಣ ಕಳಪೆಯಿಂದಾಗಿ ಹೊಲದಲ್ಲಿ ಸಂಪೂರ್ಣ ನೀರು ನಿಂತು ಕಳೆದ ೭ ವರ್ಷಗಳಿಂದ ಒಂದು ಕಾಳು ಕೂಡ ಬೆಳೆ ಬೆಳೆಯಲಾಗದೇ ನಷ್ಟ ಅನುಭವಿಸಿ ಆತ್ಮಹತ್ಯೆ ದಾರಿ ಹಿಡಿಯಬೇಕಿದೆ. ಈ ಕಾಮಗಾರಿಯೂ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಎಸ್ಟಿಮೆಂಟ್ ಪ್ರಕಾರ ಮಾಡದೇ ಬೇಕಾಬಿಟ್ಟಿ ಕಾಮಗಾರಿ ಮುಗಿಸಿ ಅಂದಾಜು ೭ ಕೋಟಿ ಹಣವನ್ನು ಸಂದಾಯ ಮಾಡಿಕೊಂಡಿರುವ ಗುತ್ತಿಗೆದಾರರು, ನೀರು ಹರೆಯುವ ಕುರಿತು ಭೂಮಿಯ ಸಮತಳವನ್ನು ಗಮನಿಸದೇ ಮನಸೋ ಇಚ್ಚೇ ಕಾಮಗಾರಿ ಮಾಡಿ ಮುಂದೆ ಹೋಗಬೇಕಿರುವ ನೀರು ಮರಳಿ ಈ ರೈತರ ಜಮೀನನಲ್ಲಿಯೇ ಸಂಗ್ರಹವಾಗಿ ಎಲ್ಲಾ ಕಡೆಯ ನೀರು ಇಲ್ಲಿಯೇ ಶೇಖರಣೆ ಆಗಿ ದೊಡ್ಡ ಕೆರೆಯಂತಾಗುತ್ತಿದೆ. ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ರೈತನ ಜಮೀನಿನಲ್ಲಿ ೧೯೭೨ ರಲ್ಲಿ ಕರೆಂಟ್ ವ್ಯವಸ್ಥೆ ಮಾಡಿಕೊಂಡಿದ್ದು, ಜಮೀನಿನಲ್ಲಿ ಒಂದು ಬಾವಿ ಹಾಗೂ ೨ ಬೋರವೆಲ್ ಇದ್ದು ಇದರಿಂದ ೮೫೦ ಕ್ಕೂ ಅಧಿಕ ದಾಳಿಂಬೆ ಸೇರಿ ಹಲವಾರು ತೋಟಗಾರಿಕೆ ಬೆಳೆಗಳಿದ್ದರು ಕೃಷಿ ಭೂಮಿ ಎಂದು ನಮೂದಿಸಿ ಇಲ್ಲಿಯವರೆಗೆ ಯಾವುದೇ ಭೂ ಪರಿಹಾರ ನೀಡದೇ ರೈತ ಕುಟುಂಬಕ್ಕೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಮೋಸ ಮಾಡಿರುತ್ತಾರೆ. ಕೂಡಲೇ ರೈತನಿಗೆ ಬರಬೇಕಾಗಿರುವ ಪರಿಹಾರವನ್ನು ಬಡ್ಡಿ ಸಮೇತವಾಗಿ ನೀಡಬೇಕು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಿ ಕಳೆದ ೭ ವರ್ಷಗಳಿಂದ ನಷ್ಟಗೊಂಡಿರುವ ರೈತ ಕುಟುಂಬಕ್ಕೆ ೨ ಕೋಟಿ ನಷ್ಟ ಪರಿಹಾರವನ್ನ ಗುತ್ತಿಗೆದಾರ ಕೊಡಬೇಕು ಜೊತೆಗೆ ಕಳಪೆಯಾಗಿರುವ ಕಾಮಗಾರಿಯನ್ನ ಮರು ಟೆಂಡರ್ ಕರೆದು ಮಾಡಬೇಕು. ಕಳಪೆ ಕಾಮಗಾರಿಯನ್ನು ವೀಕ್ಷಣೆ ಮಾಡಿರುವ ಇಂಜಿನಿಯರ ಹಾಗೂ ಇತರೆ ಅಧಿಕಾರಿಗಳನ್ನು ವಜಾ ಮಾಡಬೇಕು. ಇನ್ನು ಒಂದು ವಾರದೊಳಗಾಗಿ ಈ ಮೇಲಿನ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಲಮಟ್ಟಿಯ ಸಿ.ಇ ಕಚೇರಿಯ ಮುಂದೆ ಒಂದು ದಿನದ ಸಾಂಕೇತಿಕ ಹೋರಾಟ ಮಾಡಲಾಗುವುದು. ಅಲ್ಲದೇ, ಪರಿಹಾರ ಸಿಗದಿದ್ದಲ್ಲಿ ಬೆಂಗಳೂರಿನ ಎಂ.ಡಿ ಕಚೇರಿಯ ಮುಂದೆ ರೈತ ಕುಟುಂಬದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅನಿರ್ಧಿಷ್ಟ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ತಿಪ್ಪಣ ನಾಟೀಕಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕರಾದ ಜಕರಾಯ ಪೂಜಾರಿ, ಜಿಲ್ಲಾಸಂಚಾಲಕರಾದ ಸಂಗಪ್ಪ ಟಕ್ಕೆ, ಜಿಲ್ಲಾ ಉಪಾರ್ಧಯಕ್ಷರಾದ ಮಹದೇವ ಬನಸೋಡೆ, ನಗರ ಘಟಕ ಅಧ್ಯಕ್ಷರಾದ ಸಚೀನ ಸವನಳ್ಳಿ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande