ಕೊಪ್ಪಳ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಅಕ್ಟೋಬರ್ 6 ರಂದು ಜಿಲ್ಲಾ ವ್ಯಾಪ್ತಿಯ ರೂ. 2000 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾಹನ ದಟ್ಟನೆ ಹಾಗೂ ಕಾನೂನು ಸುವ್ಯವಸ್ಥೆ ವ್ಯವಸ್ಥಿತ ನಿರ್ವಹಣೆಯ ಉದ್ದೇಶದಿಂದ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಿ, ನಿರ್ದಿಷ್ಟ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನಗರದ ಹೊಸಪೇಟೆ ರಸ್ತೆಯ ಅಗಡಿ ಲೇಔಟ್‍ನಲ್ಲಿ ಸ್ಥಳ ನಿಗದಿ ಪಡಿಸಲಾಗಿದೆ. ಯಲಬುರ್ಗಾ, ಕುಕನೂರು, ತಳಕಲ್ ಮತ್ತು ಅಳವಂಡಿ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಬಸ್, ಕಾರು ಸೇರಿದಂತೆ ಇತರೆ ವಾಹನಗಳು ಮಿಲೇನಿಯಮ್ ಶಾಲೆಯ ಹತ್ತಿರದ ಫ್ಲೈ ಓವರ್ ಮೂಲಕ ಕೋಳೂರು ಕ್ರಾಸ್, ಮಂಗಳಾಪೂರ ಕ್ರಾಸ್ ಎನ್.ಹೆಚ್ ಬೈಪಾಸ್ ಮೂಲಕ ಹಾಲವರ್ತಿ ಕ್ರಾಸ್ ಫ್ಲೈ ಓವರ್ ಮೂಲಕ ಕಾರ್ಯಕ್ರಮದ ಸ್ಥಳ ಸಮೀಪ ಇರುವ ಅಗಡಿ ಲೇಔಟ್ ಹಿಂದುಗಡೆ ಗುರುತಿಸಿರುವ ವಾಹನ ನಿಲುಗಡೆ ಸ್ಥಳಕ್ಕೆ ಹೋಗಬೇಕು.
ಗಂಗಾವತಿ, ಕನಕಗಿರಿ, ಕಾರಟಗಿ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಬೂದಗುಂಪಾ ಕ್ರಾಸ್‍ನಿಂದ ಎನ್.ಹೆಚ್-50 ರಸ್ತೆ ಮೂಲಕ ಹಿಟ್ನಾಳ್ ಟೋಲ್ ನಂತರ ಎನ್.ಹೆಚ್-63 ಗಿಣಿಗೇರಾ ಫ್ಲೈ ಓವರ್ ಮೂಲಕ ಹೂವಿನಹಾಳ ಅಂಡರ್‍ಪಾಸ್ ಮೂಲಕ ಬಸ್‍ಗಳು ಅಗಡಿ ಲೇಓಟ್ ಹಿಂದುಗಡೆ ಇರುವ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ 4 ಚಕ್ರದ ವಾಹನಗಳು ಓಲ್ಡ್ ಆರ್.ಟಿ.ಓ ಆವರಣದಲ್ಲಿ ಇರುವ ವಾಹನ ನಿಲುಗಡೆ ಸ್ಥಳಕ್ಕೆ ತೆರಳಬೇಕು.
ಕುಷ್ಟಗಿ ಎನ್.ಹೆಚ್ ನಿಂದ ಕಾರ್ಯಕ್ರಮಕ್ಕೆ ಆಗಮಿಸುವ ಬಸ್, ಕಾರು, ಟ್ರ್ಯಾಕ್ಸ್, ಎಲ್.ಎಮ್.ವಿ ವಾಹನಗಳು ಎನ್.ಹೆಚ್-50 ಮೂಲಕ ಬೂದಗುಂಪಾ, ಹಿಟ್ನಾಳ್ ಟೋಲ್, ಗಿಣಿಗೇರಾ ಫ್ಲೈ ಓವರ್ ಮೂಲಕ ಎಂ.ಎಸ್.ಪಿ.ಎಲ್ ಮೂಲಕ ಹೂವಿನಹಾಳ ಅಂಡರ್ ಪಾಸ್ ಮೂಲಕ ಬಸ್‍ಗಳು ಅಗಡಿ ಲೇಔಟ್ ಹಿಂದುಗಡೆ ಇರುವ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ 4 ಚಕ್ರದ ವಾಹನಗಳು ಓಲ್ಡ್ ಆರ್.ಟಿ.ಓ ಆವರಣದಲ್ಲಿ ಇರುವ ವಾಹನ ನಿಲುಗಡೆ ಸ್ಥಳಕ್ಕೆ ತೆರಳಬೇಕು.
ಇರಕಲ್‍ಗಡಾ ಕಡೆಯಿಂದ ಆಗಮಿಸುವ ವಾಹನಗಳು ಹಟ್ಟಿ ಕ್ರಾಸ್‍ನಿಂದ ಭೀಮನೂರು, ಎನ್.ಹೆಚ್-63 ಗಿಣಿಗೇರಾ ಅಂಡರ್‍ಪಾಸ್ ಮೂಲಕ ಹೂವಿನಹಾಳ ಅಂಡರ್ ಪಾಸ್ ಮೂಲಕ ಬಸ್‍ಗಳು ಅಗಡಿ ಲೇಔಟ್ ಹಿಂದುಗಡೆ ಇರುವ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ 4 ಚಕ್ರದ ವಾಹನಗಳು ಓಲ್ಡ್ ಆರ್.ಟಿ.ಓ ಅವರಣದಲ್ಲಿ ಇರುವ ವಾಹನ ನಿಲುಗಡೆ ಸ್ಥಳಕ್ಕೆ ತೆರಳಬೇಕು.
ಹೊಸಪೇಟೆ, ಮುನಿರಾಬಾದ್ ಕಡೆಯಿಂದ ಆಗಮಿಸುವ ಬಸ್, ಖಾಸಗಿ ವಾಹನಗಳು, ಕ್ರೂಸರ್, ಕಾರು ಸೇರಿದಂತೆ ಎಲ್ಲಾ ವಾಹನಗಳು ಗಿಣಿಗೇರಾ ಫ್ಲೈ ಓವರ್ ಮೂಲಕ ಹೂವಿನಹಾಳ ಅಂಡರ್ ಪಾಸ್ ಮೂಲಕ ಬಸ್‍ಗಳು ಅಗಡಿ ಲೇಔಟ್ ಹಿಂದುಗಡೆ ಇರುವ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ 4 ಚಕ್ರದ ವಾಹನಗಳು ಓಲ್ಡ್ ಆರ್.ಟಿ.ಓ ಆವರಣದಲ್ಲಿ ಇರುವ ವಾಹನ ನಿಲುಗಡೆ ಸ್ಥಳಕ್ಕೆ ತೆರಳಬೇಕು.
ಖಾಸಗಿ ವಾಹನಗಳು, ಕ್ರೂಸರ್, ಕಾರು ಸೇರಿದಂತೆ ಎಲ್ಲಾ ವಾಹನಗಳಿಗೆ ಕೊಪ್ಪಳ ನಗರದಲ್ಲಿ ಸಂಚಾರಕ್ಕೆ ನಿರ್ಬಂಧವಿದ್ದು, ಈ ವಾಹನಗಳು ಎನ್.ಹೆಚ್. 63 ಬೈಪಾಸ್ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ದ್ವಿ-ಚಕ್ರ ವಾಹನಗಳಿಗೆ ಹಳೆಯ ಆರ್.ಟಿ.ಓ ಕಛೇರಿ ಎದುರುಗಡೆ ಇರುವ ಸೋಮಲಿಂಗಪ್ಪ ಲೇಔಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಹಾಗೂ ಕೊಪ್ಪಳ ನಗರದಿಂದ ಕಾರ್ಯಕ್ರಮಕ್ಕೆ ಆಗಮಿಸುವವರು ಗಂಜ್ ಸರ್ಕಲ್‍ನಿಂದ ಗವಿಸಿದ್ದೇಶ್ವರ ಮಠದ ಹಿಂಭಾಗದಿಂದ ಎನ್.ಹೆಚ್. 63 ಬೈಪಾಸ್ ಮೂಲಕ ಅಗಡಿ ಲೇಔಟ್ ಹಿಂದುಗಡೆ ಗುರುತಿಸಿರುವ ವಾಹನ ನಿಲುಗಡೆ ಸ್ಥಳಕ್ಕೆ ತೆರಳಬಹುದಾಗಿದೆ. ಜವಾಹರ ರಸ್ತೆ, ಸಾಲಾರ ಜಂಗ್ ರಸ್ತೆ, ಲೇಬರ್ ಸರ್ಕಲ್ ದಿಂದ ಎನ್.ಹೆಚ್. 63 ಬೈಪಾಸ್ ಮೂಲಕ ಅಗಡಿ ಲೇಔಟ್ ಹಿಂದುಗಡೆ ಗುರುತಿಸಿರುವ ವಾಹನ ನಿಲುಗಡೆ ಸ್ಥಳಕ್ಕೆ ತೆರಳಬೇಕು.
ಕೊಪ್ಪಳ ನಗರದ ಅಭಯ್ ಸಾಲ್ವೆಂಟ್ ದಿಂದ ಲೇಬರ್ ಸರ್ಕಲ್ ವರೆಗೆ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಸುಗಮ ಸಂಚಾರದ ಉದ್ದೇಶದಿಂದ ವಾಹನ ಸವಾರರು ತಮ್ಮ ಯಾವುದೇ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ಇರುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷ ಜನ ಸೇರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಕಾರ್ಯಕ್ರಮ ಸುಗಮವಾಗಿ ಜರುಗಲು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್