ಹುಬ್ಬಳ್ಳಿ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ‌್ಷ್ಮಿ, ಶಕ್ತಿ ಯೋಜನೆ ಹಾಗೂ ಯುವ ನಿಧಿ ಯೋಜನೆಗಳಿಗೆ ವಾರ್ಷಿಕ ರೂ.60 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಸುಧಾರಿಸಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯ ದೇವರ ಗುಡಿಹಾಳ ರಸ್ತೆಯ ವಿಶಾಲ ನಗರದಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.34 ರಲ್ಲಿ ರೂ.10 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಇಲಾಖೆಯ ಕಾಮಗಾರಿಗೆ ಶಂಕುಸ್ಥಾಪನೆ, ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ರೂ.60 ಸಾವಿರ ಕೋಟಿ ಹಣ ನೇರವಾಗಿ ಜನರಿಗೆ ತಲುಪುತ್ತಿದೆ. 500 ಕೋಟಿಗೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ್ದಾರೆ. ಆ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಗೃಹ ಲಕ‌್ಷ್ಮಿ, ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿಯಾಗಲಿದೆ ಎಂದು ಟೀಕಿಸುತ್ತಿದ್ದರು. ಆದರೆ ಇಂದು ಅವರ ನಿರೀಕ್ಷೆಗೂ ಮೀರಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಇಂದು ರೂ.14 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಅನುದಾನ ತರಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಜನರ ಜೊತೆ ನಿರಂತರ ಸಂಪರ್ಕ ಹೊಂದಿರಬೇಕಾಗುತ್ತದೆ. ಕಳೆದ ಎರಡುವರೆ ವರ್ಷದಲ್ಲಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮಗಳು ಒಂದೇ. ಭಾವೈಕ್ಯತೆಯಿಂದ ಕೂಡಿದ ದೇಶ ನಮ್ಮದಾಗಿದೆ. ನಮ್ಮ ದೇಶದ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa