
ವಿಜಯಪುರ, 23 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಬರಟಗಿ ಗ್ರಾಮದಲ್ಲಿ ಅಕ್ಟೋಬರ್ 25 ರಂದು ಶನಿವಾರ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ನಾನಾ ವಿಭಾಗಗಳ ನುರಿತ ತಜ್ಞರ ವೈದ್ಯರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಅಲ್ಲದೇ, ವೈದ್ಯರ ಸಲಹೆ ಮೇರೆಗೆ ಉಚಿತ ಔಷಧಿಗಳ ವಿತರಣೆ ನಡೆಯಲಿದೆ. ಅಲ್ಲದೇ, ಪ್ರಾಥಮಿಕ ರಕ್ತ ಮೂತ್ರ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು.
ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಿದರೆ, ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಸಾಮಾನ್ಯ ವಾರ್ಡಗಳಿಗೆ ದಾಖಲಾದರೆ ಅಂಥ ರೋಗಿಗಳಿಗೆ ಶೇಕಡಾ 59ರ ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುವದು. ಅಲ್ಲದೇ, ಚಿಕಿತ್ಸೆಗೆ ಬೇಕಾಗುವ ಔಷಧಿಗಳ ವೆಚ್ಚವನ್ನು ರೋಗಿಗಳೇ ಭರಿಸಬೇಕಾಗುತ್ತದೆ.
ಬರಟಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಎಲ್ಲ ನಿವಾಸಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನಟಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande