ವಿಜಯಪುರ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಾಯಿ ಕಡಿತಕ್ಕೊಳಗಾದಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆ ವಹಿಸಿ, ತಕ್ಷಣ ಲಸಿಕೆ ಪಡೆದುಕೊಳ್ಳುವ ಮೂಲಕ ರೇಬಿಸ್ ಬಾರದಂತೆ ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಬೆಂಗಳೂರು ಹಾಗೂ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ರೇಬಿಸ್ ತಡೆಗಟ್ಟಲು ಮುಂದಾಗೋಣ ನೀವು-ನಾವು ನಮ್ಮ ಸಮಾಜ ಎಂಬ ಘೋಷವಾಕ್ಯದಡಿ 2025-ರ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ಬೀದಿ ಹಲವಾರು ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ನಾಯಿ ಕಡಿತಕ್ಕೊಳಗಾದಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೇಬಿಸ್ ನಿರೋಧಕ ಲಸಿಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಲಸಿಕೆ ಹಾಕಿಸಬೇಕು ಎಂದು ಅವರು ಹೇಳಿದರು.
ರೇಬಿಸ್ ರೋಗ ನಿಯಂತ್ರಣಕ್ಕಾಗಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಈಗಾಗಲೇ ಮುದ್ದೇಬಿಹಾಳದಲ್ಲಿ ಆರಂಭಿಸಲಾಗಿದೆ. ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿ, ಆರೋಗ್ಯ ಸಂಸ್ಥೆಗಳು ಸೇರಿದಂತೆ ಎಲ್ಲ ಇಲಾಖೆಗಳು ಕೈ ಜೋಡಿಸಿ ನಿಯಂತ್ರಣಕ್ಕೆ ಮುಂದಾಗಬೇಕು. ಪಾಲಿಕೆ ವತಿಯಿಂದ ಬೀದಿ ನಾಯಿಗಳ ಜನನ ನಿಯಂತ್ರಣ ಹಾಗೂ ರೇಬಿಸ್ ನಿರೋಧಕ ಲಸಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸÀಲಾಗುತ್ತಿದೆ. ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕುವ ಹಾಗೂ ಹಾಗೂ ನಿಯಮಾನುಸಾರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ರೇಬಿಸ್ ನಿಯಂತ್ರಣಕ್ಕಾಗಿ ಎಲ್ಲ ಇಲಾಖೆಗಳು ಕೈ ಜೋಡಿಸಿ, ಲಸಿಕೆ ಹಾಕುವ ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಂಡು ಮೈಕ್ರೋ ಪ್ಲ್ಯಾನ್ ಹಾಕಿಕೊಂಡು, ಅಗತ್ಯ ಸಿಬ್ಬಂದಿಯೊಂದಿಗೆ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಭ್ಯತೆಯನುಸಾರ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಬೀದಿ ನಾಯಿಗಳಿಗೆ ಈಗಾಗಲೇ ಆಶ್ರಯ ಕೇಂದ್ರವನ್ನು ಬುರಣಾಪುರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ವಿವಿಧ ಬೀದಿ ನಾಯಿಗಳಿಗೆ ಈ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗುತ್ತಿದ್ದು, ಪಾಲಿಕೆ ಹಾಗೂ ಪಶು ವೈದ್ಯಕೀಯ ಇಲಾಖೆಗಳು ಜಂಟಿಯಾಗಿ ಈ ಕೇಂದ್ರವನ್ನು ನಿರ್ವಹಿಸಲಿದ್ದಾರೆ ರೇಬಿಸ್ ರೋಗದ ಕುರಿತು ಗ್ರಾಮೀಣ, ನಗರ ಪ್ರದೇಶ ಸೇರಿದಂತೆ ಶಾಲಾ ಕಾಲೇಜ್ ಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಈ ರೋಗದ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಲು ಆಗಾಗ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಪಶುವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ.ಶಿವಶರಣಪ್ಪ ಯಲಗೋಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ. ವಿಶ್ವ ರೇಬಿಸ್ ದಿನ್ ಸೆ.28ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಕಳೆದ 18 ವರ್ಷಗಳಿಂದ ಈ ದಿನಾಚರಣೆ ಆಚರಿಸಲಾಗುತ್ತಿದೆ. 2030ರವರೆಗೆ ರೇಬಿಸ್ ಮುಕ್ತ ಮಾಡಲು ಈ ದಿಸೆಯಲ್ಲು ನಾವೆಲ್ಲರೂ ಪ್ರಯತ್ನಿಸೋಣ. ಈ ಕುರಿತು ಹೆಚ್ಚೆಚ್ಚು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ರೇಬಿಸ್ ಮುಕ್ತ ಮಾಡಲು ಅವರು ಕರೆ ನೀಡಿದರು.
ಸಾಂಕ್ರಾಮಿಕ ವಿಭಾಗದ ಹಿರಿಯ ವಿಜ್ಞಾನಿಗಳಾದ ಡಾ.ಗಂಗಾಧರ ಎನ್.ಎಲ್. ಅವರು, ರೇಬಿಸ್ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ್ ಸೌದಾಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸಂಪತ್‍ಕುಮಾರ ಗುಣಾರಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾಎಸ್.ಘೋಣಸಗಿ, ಪಾಲಿಕ್ಲಿನಿಕ್ ಉಪನಿರ್ದೇಶಕ ವಿಠೋಬ ಎನ್.ಆಸಂಗಿಹಾಳ, ಜಿ.ಪಂ.ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಪಾಲಿಕೆ ಆರೋಗ್ಯಾಧಿಕಾರಿ ಎಸ್.ಎಲ್.ಲಕ್ಕಣ್ಣವರ, ಜಿಲ್ಲಾಸ್ಪತ್ರೆ ವೈದ್ಯ ಅಚ್ಯುತ್ ಪತ್ತಾರ, ಜಿಲ್ಲೆಯ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande