ಬೆಂಗಳೂರು, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ಜನರ ರೋಧನೆ ಮುಗಿಲು ಮುಟ್ಟಿದೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಲೆ, ಸುಲಿಗೆ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿವೆ. ಅತಿವೃಷ್ಟಿಯಿಂದ ಕಂಗೆಟ್ಟು ಹೋಗಿರುವ ಕಲ್ಯಾಣ ಕರ್ನಾಟಕದ ರೈತರ ಗೋಳು ಹೇಳತ್ತೀರದಾಗಿದೆ, ಬೆಂಗಳೂರಿನಲ್ಲಿ ಹಳ್ಳ ಬಿದ್ದ ರಸ್ತೆಗಳಿಂದ ನಿತ್ಯವೂ ಸಾವು- ನೋವುಗಳು ಸಂಭವಿಸುತ್ತಿವೆ, ಆದರೆ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಇದನ್ನು ಸಂಪೂರ್ಣವಾಗಿ ಮರೆತು ಸಹೋದ್ಯೋಗಿಗಳಿಗೆ ಔತಣ ಕೂಟ ಕೊಡಿಸುವುದರಲ್ಲಿ ಮಗ್ನರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಬಣ 'ಮುಖ್ಯಮಂತ್ರಿ ಅವಧಿಯ ಸುತ್ತ' ಹೇಳಿಕೆ, ಪ್ರತಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಇದನ್ನು ಉತ್ತೇಜಿಸಲೆಂಬಂತೆ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಕುರಿತು ತಮ್ಮದೇ ಆದ ದೃಷ್ಟಿಕೋನಗಳಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಶಾಸಕರ ಅಭಿಪ್ರಾಯವೇ ಅಂತಿಮ ಎಂದರೆ, ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಿರ್ಣಯವೇ ಅಧ್ಯಾದೇಶ ಎಂದು ಹೇಳುತ್ತಿದ್ದಾರೆ.
ಒಟ್ಟಾರೆ ಸರ್ಕಾರದಲ್ಲಿರುವ ಯಾರಿಗೂ ಜನರ ಹಿತ, ನಾಡಿನ ಅಭಿವೃದ್ಧಿ ಬೇಕಾಗಿಲ್ಲ. ಮೋಜು ಪಾರ್ಟಿಗಳನ್ನು ಏರ್ಪಡಿಸುವ ಮೂಲಕ ಅಧಿಕಾರಕ್ಕಾಗಿ ಕಿತ್ತಾಟ ಹಾಗೂ ಶೀತಲ ಸಮರ ನಿತ್ಯವೂ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಿಹಾರ ಚುನಾವಣೆಗಾಗಿ ಮಂತ್ರಿಗಳಿಗೆ 'ಟಾರ್ಗೆಟ್ ನೀಡಿ ಸೂಟ್ ಕೇಸ್ ತುಂಬಿಸಲಾಗುತ್ತಿದೆ' ಎಂಬ ಮಾತು ದಟ್ಟವಾಗಿ ಹರಡಿದೆ. ನಿಮ್ಮ ಸ್ವಾರ್ಥ, ಅಧಿಕಾರ ರಾಜಕಾರಣ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡುವುದಕ್ಕಾಗಿ ಕರ್ನಾಟಕದ ಜನ ನಿಮಗೆ ಅಧಿಕಾರ ಕೊಟ್ಟಿಲ್ಲ, ಜನರ ಸಂಕಷ್ಟಕ್ಕೆ ಸ್ಪಂದಿಸದ ನಿಮ್ಮ ವರ್ತನೆ, ಧೋರಣೆ, ಸರ್ಕಾರ ನಡೆಸುವ ರೀತಿ ಹೀಗೆಯೇ ಮುಂದುವರೆದರೆ ಜನರೇ ಅತೀ ಶೀಘ್ರದಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ. ಘನತೆವೆತ್ತ ರಾಜ್ಯಪಾಲರು ಸರ್ಕಾರದ ಈ ವರ್ತನೆಗೆ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಿ ಅಂಕುಶ ಹಾಕಲಿ, ಜನರ ಕಷ್ಟ, ದುಃಖ - ದುಮ್ಮಾನಗಳಿಗೆ ಸರ್ಕಾರ ಸ್ಪಂದಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಿ ಎಂದು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa