ವಿಜಯಪುರ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ತಮಗೆ ವಹಿಸಿರುವ ಖಾತೆ ನಿಭಾಯಿಸುವಲ್ಲಿ ವಿಫಲವಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೈಕಮಾಂಡ್ ಓಲೈಸಿ ಮಂತ್ರಿಗಿರಿ ಉಳಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಗುರಿಯಾಗಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕನಿಷ್ಠ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಅವರ ತಂದೆ ಎಐಸಿಸಿ ಅಧ್ಯಕ್ಷರು ಎಂಬುದೊಂದೇ ಪ್ರಿಯಾಂಕ್ ಖರ್ಗೆ ಅವರಿಗೆ ಇರುವ ಅರ್ಹತೆ ಬಿಟ್ಟರೆ ಅವರಲ್ಲಿ ಸ್ವಂತದ್ದು ಏನೂ ಇಲ್ಲ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತದ ಹೆಮ್ಮೆ. ಜನ ಕಷ್ಟಕ್ಕೆ ಸಿಲುಕಿದಾಗೆಲ್ಲ ಸಂಘ ಅವರ ನೆರವಿಗೆ ಧಾವಿಸಿರುತ್ತದೆ. ತಂದೆ ಹೆಸರಿನಲ್ಲಿ ಚುನಾವಣೆಗಳನ್ನು ಗೆದ್ದು ಅಧಿಕಾರ ಅನುಭವಿಸೋರಿಗೆ ಇದೆಲ್ಲ ಅರ್ಥವಾಗೋದಿಲ್ಲ. ಜನ ಸಂಕಷ್ಟದಲ್ಲಿದ್ದಾಗ ಮರಿಖರ್ಗೆ ಎಲ್ಲಿ ಇರುತ್ತಾರೆ ಎಂಬುದು ಸಹ ಗೊತ್ತಾಗುವುದಿಲ್ಲ ಎಂದರು.
ಈಚೆಗೆ ಇವರ ಪರಮಾಪ್ತನೊಬ್ಬ ಗಾಂಜಾ, ಡ್ರಗ್ಸ್ ಪೂರೈಕೆಯಲ್ಲಿ ಸಿಕ್ಕಿಬಿದ್ದಿದ್ದ ಯುವ ಸಮೂಹವನ್ನು ದಾರಿತಪ್ಪಿಸುವ ಕೆಲಸ ಇವರುಗಳು ಮಾಡುತ್ತಿದ್ದರೆ ಸಂಘ ಯುವಕರನ್ನು ರಾಷ್ಟ್ರಪ್ರೇಮಿಗಳನ್ನಾಗಿಸುತ್ತಿದೆ ಎಂದರು.
ಮುಖಂಡ ಬಿ.ಕೆ.ಹರಿಪ್ರಸಾದ ಅವರು ಸಂಘದ ಮಾಡಿರುವ ಆರೋಪಗಳಿಗೆ ಉತ್ತರಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮಾಧ್ಯಮ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ಸಂಘ ಸಮಾಜಕ್ಕೆ ಸಮರ್ಪಿತ ಸಂಘಟನೆ ಅದರ ಎಲ್ಲ ಅಂಗ ಸಂಸ್ಥೆಗಳು ನೋಂದಣಿ ಆಗಿವೆ. ಸಂಘಕ್ಕೆ ಪದಾಧಿಕಾರಿಗಳು ಇರುವುದಿಲ್ಲ, ಸದಸ್ಯತ್ವಕ್ಕೂ ಹಣ ಪಡೆಯುವುದಿಲ್ಲ ಹೀಗಿರುವಾಗ ಇವರ ಟೀಕೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮೂಗನೂರಮಠ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಮಲ್ಲಿಕಾರ್ಜುನ ಕಾಂಬಳೆ ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande