ವಿಜಯಪುರ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಂಗದ ಮೇಲೆ ಹಾಸ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಜನಮನ್ನಣೆ ಗಳಿಸಿದ್ದ ರಾಜು ತಾಳಿಕೋಟಿ ಎಂಬ ಅದ್ಬುತ ಕಲಾವಿದ ನಗುತ್ತಲೇ ಜೀವನ ರಂಗಕ್ಕೆ ವಿದಾಯ ಹೇಳಿದ್ದಾರೆ. ರಂಗಭೂಮಿ ಇಂಥ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡು ಬಲವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ವಿಷಾದಿಸಿದರು.
ನಿಧನರಾಗಿರುವ ರಂಗಕರ್ಮಿ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರ ಅಂತಿಮ ದರ್ಶನ ಪಡೆದು ಸಿಂದಗಿ ಕನ್ನಡ ಸಾಹಿತ್ಯ ಬಳಗ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಚಿವರು, ಹಾಸ್ಯದ ಮೂಲಕ ಸಮಾಜದ ಲೋಪ ತಿದ್ದುವ ಮಹತ್ವದ ಸೇವೆ ಮಾಡಿದ್ದರು. ಸಾವಿರಾರು ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡಿ, ರಂಗಭೂಮಿ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ್ದರು ಎಂದು ವಿವರಿಸಿದರು.
ಬಡತನದಲ್ಲಿ ಹುಟ್ಟಿ, ತಾಳಿಕೋಟೆಯ ಶ್ರೀಖಾಸ್ಗತೇಶ್ವರ ಮಠದಲ್ಲಿ ತ್ರಿವಿಧ ದಾಸೋಹ ಮಾಡಿ, ಸ್ವಂತ ನಾಟಕ ಕಂಪನಿ ಕಟ್ಟಿ ಬೆಳೆಸಿದ್ದರು. ತಮ್ಮ ಕಷ್ಟದ ಮಧ್ಯೆಯೇ ಕುಟುಂಬದ ನಿರ್ವಹಣೆ ಮಾಡುತ್ತ, ಸಾಮಾಜಿಕ ಸೇವೆಯಲ್ಲೂ ತೊಡಗಿದ್ದರು ಎಂದು ವಿವರಿಸಿದರು.
ಹುಟ್ಟು ಆಕಸ್ಮಿಕವಾದರೂ ಸಾವು ನಿಶ್ಚಿತ. ಆದರೆ ಬದುಕಿರುವ ಮಾಡುವ ಕಾರ್ಯಗಳು, ಸಾಧನೆಗಳು ಶಾಶ್ವತವಾಗಿ ಜನರ ಮನಗಳಲ್ಲಿ ಉಳಿಯುತ್ತವೆ. ಹಾಸ್ಯ ಕಲಾವಿದರಾಗಿ ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕಕ್ಕೆ ಸಾಧನೆಯಿಂದ ಕೀರ್ತಿ ತಂದಿದ್ದರು ಎಂದು ವಿವರಿಸಿದರು.
ನನ್ನ ಒಡನಾಡಿಯೂ ಆಗಿದ್ದ ರಾಜು, ಬಸವನಬಾಗೇವಾಡಿ ಕ್ಷೇತ್ರದಲ್ಲೂ ಹಲವು ಕಾರ್ಯಕ್ರಮಗಳಲ್ಲಿ ನನ್ನೊಂದಿಗೆ ಭಾಗವಹಿಸಿದ್ದರು. ಅವರ ಅಗಲಿಕೆ ನಾಡಿನ ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ರಾಜು ಅವರ ಸಾಧನೆಯನ್ನು ಮುಂಸಿನ ಪೀಳಿಗೆ ಸದಾ ಸ್ಮರಿಸುವಂತೆ ಚಿರಸ್ಥಾಯಿ ಆಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ ಮಾಸ್ತರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಸಿದ್ದಲಿಂಗ ಚೌಧರಿ, ಬಸವರಾಜ ಪಂಚಗಲ್, ಮಹಾಂತೇಶ ಗಜೇಂದ್ರಗಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande