ವಿಜಯಪುರ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜ ಆಸ್ಪತ್ರೆಯ ಕಿವಿ, ಮೂಗು ಹಾಗೂ ಗಂಟಲು ವಿಭಾಗದಲ್ಲಿ ಹುಟ್ಟು ಶ್ರವಣ ದೋಷದಿಂದ ಬಳಲುತ್ತಿದ್ದ ಎರಡು ವರ್ಷದೊಳಗಿನ ಇಬ್ಬರು ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅತ್ಯಾಧುನಿಕ ಕಿವಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ಗುರುವಾರ ಈ ಶಸ್ಚ್ರಚಿಕಿತ್ಸೆ ನಡೆಸಲಾಗಿದ್ದು, ಈ ಯೋಜನೆಡಿ ಆಸ್ಪತ್ರೆಯಲ್ಲಿ ಈವರೆಗೆ ಐದು ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದಂತಾಗಿದೆ. ಅಲ್ಲದೇ, ಈ ಮಕ್ಕಳು ಈಗಾಗಲೇ ಮಾತನಾಡುವುದ ಪ್ರಕ್ರಿಯೆ ಪ್ರಾರಂಭವಾಗಿದೆ.
ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಮೂರು ವರ್ಷದ ಒಳಗಿನ ಹುಟ್ಟು ಕಿವುಡ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಲಭ್ಯವಿದ್ದು ರೂ. 6 ಲಕ್ಷ ವೆಚ್ಚದ ಕಿವಿಯ ಇಂಪ್ಲಾಂಟನ್ನು ಒಳಕಿವಿಗೆ ಅಳವಡಿಸಬಹುದಾಗಿದೆ. ನಂತರ ಎರಡು ವರ್ಷ ವಾಕ್ ಶ್ರವಣ ತರಬೇತಿಯನ್ನು ಕೊಡಲಾಗುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ಹೊನ್ನುಟಗಿ ತಿಳಿಸಿದ್ದಾರೆ.
ಯಾವುದೇ ಮಗು ಶಬ್ದಗಳಿಗೆ ಸ್ಪಂದಿಸದಿದ್ದರೆ ಮೂರು ತಿಂಗಳ ಒಳಗೆ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಬೇಕು ಮತ್ತು ಶ್ರವಣದೋಷ ಕಂಡುಬಂದರೆ ಒಂದೂವರೆ ವರ್ಷದೊಳಗೆ ಚಿಕಿತ್ಸೆ ಮಾಡಿಸಿದರೆ ಮಗು ಇತರ ಮಕ್ಕಳಂತೆ ಪೂರ್ಣವಾಗಿ ಮಾತನಾಡುವುದನ್ನು ಕಲಿತು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಅಲ್ಲದೇ, ಸಮಾಜದ ಮುಖ್ಯವಾಹಿನಿಗೆ ಸೇರಲು ಅನಕುಲವಾಗುತ್ತದೆ. ಆದರೆ, ಮೂರು ವರ್ಷದ ನಂತರ ಚಿಕಿತ್ಸೆ ಬಯಸಿದರೆ ಆ ಮಗುವಿಗೆ ಸರಕಾರದ ಈ ಉಚಿತ ಯೋಜನೆ ಸೌಲಭ್ಯ ಇರುವುದಿಲ್ಲ. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಖಾಸಗಿಯಾಗಿಯೂ ಈ ಶಸ್ತ್ರಚಿಕಿತ್ಸೆ ಲಭ್ಯವಿದೆ. ಯಾವುದೇ ಮಗುವಿಗೆ ಈ ತರಹದ ಶಸ್ತ್ರಚಿಕಿತ್ಸೆ ಎರಡು ವರ್ಷದೊಳಗೆ ಮಾಡಿಸಿದರೆ ಮಾತ್ರ ಅತ್ಯಂತ ಒಳ್ಳೆಯ ಫಲಿತಾಂಶ ಸಿಗುತ್ತದೆ. ಆದರೆ ಐದು ವರ್ಷದ ನಂತರ ಶಸ್ತ್ರಚಿಕಿತ್ಸೆಯಾದರೂ ಮಗುವಿಗೆ ಕೇವಲ ಶಬ್ದ ಕೇಳುತ್ತದೆ ಹೊರತು ಮಾತುಗಳು ಅರ್ಥವಾಗುವ ಶಕ್ತಿ ಇರದ ಕಾರಣ ಮಾತನಾಡಲು ಬರುವುದಿಲ್ಲ ಎಂದು ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಮತ್ತು ಇಂಪ್ಲಾಂಟ್ ಕೋ-ಆರ್ಡಿನೇಟರ್ ಡಾ. ಎಚ್. ಟಿ. ಲತಾದೇವಿ ತಿಳಿಸಿದ್ದಾರೆ.
2025ರ ಜನವರಿಯಿಂದಲೇ ಈ ಯೋಜನೆ ನಮ್ಮ ಆಸ್ಪತ್ರೆಯಲ್ಲಿ ಪ್ರಾರಂಭವಾಗಿದ್ದು, ನಮ್ಮಲ್ಲಿ ಎಲ್ಲ ನವಜಾತಶಿಶುಗಳನ್ನು ಶ್ರವಣ ಪರೀಕ್ಷೆಗಳಿಗೆ ಒಳಪಡಿಸಿ ಹುಟ್ಟು ಕಿವುಡತನ ಪತ್ತೆಹಚ್ಚುವ ಸೌಲಭ್ಯ ಹಾಗೂ ಶಸ್ತ್ರಚಿಕಿತ್ಸೆಯು ಲಭ್ಯವಿರುವುದರಿಂದ ಜನ ಸಾಮಾನ್ಯರು ಈ ಯೋಜನೆಯನ್ನು ಉಪಯೋಗಿಸಬೇಕು ಎಂದು ಕುಲಪತಿ ಡಾ. ಅರುಣ ಚಂ. ಇನಾಮದಾರ ತಿಳಿಸಿದ್ದಾರೆ.
ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರ ಈ ಯಶಸ್ವಿ ಶಸ್ತ್ರಚಿಕಿತ್ಸೆಗೆ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲಭ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪನವರ ಅವರು ಎಚ್. ಟಿ. ಲತಾದೇವಿ ಮತ್ತತು ಡಾ. ವಾಸಂತಿ ಆನಂದ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande