ನವದೆಹಲಿ, 09 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಆಧಾರ್ನಂತೆ ಪ್ಯಾನ್ ನಂಬರ್ ಕೂಡ ಈಗ ಬಹಳ ಅಗತ್ಯ ಇರುವ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ವಿವಿಧ ಹೂಡಿಕೆಗಳು ಸೇರಿದಂತೆ ಬಹುತೇಕ ಹಣಕಾಸು ಸೇವೆಗಳಿಗೆ ಪ್ಯಾನ್ ಬೇಕೇ ಬೇಕು. ಪರ್ಮನೆಂಟ್ ಅಕೌಂಟ್ ನಂಬರ್ ಎನ್ನಲಾಗಿರುವ ಇದರಲ್ಲಿ ಅಕ್ಷರ ಪದ ಮಿಶ್ರಿತ 10 ಅಂಕಿಗಳಿರುತ್ತವೆ. ಆದಾಯ ತೆರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಪ್ಯಾನ್ ರೂಪಿಸಲಾಗಿದೆ. ಈಗ ಹೊಸದಾಗಿ ಪ್ಯಾನ್ ಮಾಡಿಸುವುದು ತುಸು ಸುಲಭದ ಕೆಲಸ. ಆದರೆ, ಕೆಲ ದಿನಗಳವರೆಗೆ ಕಾಯಬೇಕಾಗುತ್ತದೆ. ನೀವು ತ್ವರಿತವಾಗಿ ಪ್ಯಾನ್ ಮಾಡಿಸುವುದಿದ್ದರೆ ಆಧಾರ್ ಮೂಲಕ ಮಾರ್ಗವುಂಟು. ಬಹಳ ಬೇಗನೇ ನೀವು ಇ-ಪ್ಯಾನ್ ಪಡೆಯಬಹುದು. ಇದು ಮಾಮೂಲಿಯ ಪ್ಯಾನ್ ಕಾರ್ಡ್ನಷ್ಟೇ ಮೌಲ್ಯ ಹೊಂದಿರುತ್ತದೆ. ಎಲ್ಲದಕ್ಕೂ ಅದನ್ನು ಬಳಸಬಹುದು.
ನೀವು ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ಮಾಡಿಸಬೇಕೆಂದರೆ ಆಧಾರ್ ನಂಬರ್ ಹೊಂದಿರಬೇಕು. ನಿಮಗೆ ತತ್ಕ್ಷಣವೇ ಪ್ಯಾನ್ ನಂಬರ್ ಅಲಾಟ್ ಆಗುತ್ತದೆ. ಪಿಡಿಎಫ್ ರೂಪದಲ್ಲಿ ಪ್ಯಾನ್ ಪ್ರಾಪ್ತವಾಗುತ್ತದೆ. ಇದಕ್ಕೆ ಯಾವ ಶುಲ್ಕ ಪಾವತಿಸಬೇಕಿಲ್ಲ. ಇ-ಪ್ಯಾನ್ ಪಡೆಬೇಕೆಂದರೆ ಆಗಲೇ ತಿಳಿಸಿದಂತೆ ಆಧಾರ್ ಕಾರ್ಡ್ ಹೊಂದಿರಬೇಕು. ಮತ್ತು ಆಧಾರ್ಗೆ ಮೊಬೈಲ್ ನಂಬರ್ ಜೋಡಿತವಾಗಿರಬೇಕು.
ಈಗಾಗಲೇ ಪ್ಯಾನ್ ನಂಬರ್ ಹೊಂದಿದ್ದು ಅದು ಕಳೆದುಹೋಗಿದ್ದವರು ಪ್ಯಾನ್ ರೀಪ್ರಿಂಟ್ ಪಡೆಯಬಹುದು. ಒಮ್ಮೆಯೂ ಪ್ಯಾನ್ ಮಾಡಿಸಿಯೇ ಇಲ್ಲದಿದ್ದರೆ ಆಗ ಇ-ಪ್ಯಾನ್ ಪಡೆಯಬಹುದು.
ಆನ್ಲೈನ್ನಲ್ಲಿ ಇ-ಪ್ಯಾನ್ ಪಡೆಯುವ ಕ್ರಮ
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ಗೆ ಹೋಗಿ: www.incometax.gov.in/iec/foportal/
ಈ ಪೋರ್ಟಲ್ನಲ್ಲಿ ಮುಖ್ಯಪುಟದಲ್ಲಿ ಕಾಣುವ ‘ಇನ್ಸ್ಟೆಂಟ್ ಇ-ಪ್ಯಾನ್’ ಅನ್ನು ಕ್ಲಿಕ್ ಮಾಡಿ.
‘ಗೆಟ್ ನ್ಯೂ ಇ-ಪ್ಯಾನ್’ ಪುಟದಲ್ಲಿ ನೀವು ನಿಮ್ಮ 12 ಅಂಕಿಗಳ ಆಧಾರ್ ನಂಬರ್ ಅನ್ನು ನಮೂದಿಸಿ.
ಚೆಕ್ಬಾಕ್ಸ್ ಟಿಕ್ ಮಾಡಿ, ‘ಕಂಟಿನ್ಯೂ’ ಕ್ಲಿಕ್ ಮಾಡಿರಿ.
ಈಗ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಆ ಸಂಖ್ಯೆಯನ್ನು ನಮೂದಿಸಿ.
ಈಗ ಯುಐಡಿಎಐನಲ್ಲಿ ನಿಮ್ಮ ಆಧಾರ್ ವಿವರವನ್ನು ಪರಾಮರ್ಶಿಸಲು ಅನುಮತಿ ಕೇಳುತ್ತದೆ. ಆ ಚೆಕ್ ಬಾಕ್ಸ್ ಟಿಕ್ ಮಾಡಿ. ಬಳಿಕ ‘ಕಂಟಿನ್ಯೂ’ ಕ್ಲಿಕ್ ಮಾಡಿ
ಅಂತಿಮವಾಗಿ ನೀವು ಸಲ್ಲಿಕೆ ಮಾಡಿದಾಗ ಪ್ರಕ್ರಿಯೆ ಮುಕ್ತಾಯವಾದಂತೆ. ನಿಮಗೆ ಸ್ವೀಕೃತಿ ಸಂಖ್ಯೆ ಬರುತ್ತದೆ. ಅದನ್ನು ಉಳಿಸಿಟ್ಟುಕೊಂಡಿರಿ. ನಿಮ್ಮ ಮೊಬೈಲ್ ನಂಬರ್ಗೆ ದೃಢೀಕರಣ ಸಂದೇಶ ಕೂಡ ಬರುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್