ಸ್ಟಾಕ್ಹೋಮ್, 04 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಸ್ಮಾರ್ಟ್ಟಿವಿ, ಸ್ಮಾರ್ಟ್ಫೋನ್ ಬಂದ ಬಳಿಕ ಮಕ್ಕಳ ಏಕಾಗ್ರತೆ ಅದರತ್ತ ತಿರುಗಿದೆ. ಪುಟಾಣಿ ಮಕ್ಕಳು ಸ್ಮಾರ್ಟ್ಫೋನ್ ಕೈಗಿಡದಿದ್ದರೆ ಊಟ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕೆಲವು ಸಮಸ್ಯೆಗಳು ಉಲ್ಬಣಗೊಂಡಿವೆ. ಸದ್ಯ ಇವೆಲ್ಲವನ್ನು ಗಮನಿಸಿದ ಸರ್ಕಾರ ಭವಿಷ್ಯದಲ್ಲಿ ಮಾರಕ ಖಂಡಿತ ಎಂಬುದನ್ನು ಅರಿತು ನಿರ್ಧಾರವೊಂದನ್ನು ಮಾಡಿದೆ.
2 ವರ್ಷದೊಳಗಿನ ಮಕ್ಕಳಿಗೆ ಟಿವಿ ಮತ್ತು ಸ್ಮಾರ್ಟ್ಫೋನ್ ವೀಕ್ಷಿಸುವುದನ್ನು ಸ್ವೀಡನ್ ನಿಷೇಧಿಸಿದೆ.
2 ವರ್ಷಕ್ಕಿಂತ ಕೆಳಗಿನ ಮಕ್ಕಳು ಸ್ಮಾರ್ಟ್ಫೋನ್, ಸ್ಮಾರ್ಟ್ಟಿವಿ ಬಳಸದಂತೆ ಪೋಷಕರನ್ನು ಒತ್ತಾಯಿಸಿದೆ. ಡಿಜಿಟಲ್ ಮಾಧ್ಯಮ ಮತ್ತು ದೂರದರ್ಶನದಿಂದ ಸಂಪೂರ್ಣ ದೂರವಿಡಬೇಕು ಎಂದು ಕೇಳಿಕೊಂಡಿದೆ.
ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ಟಿವಿ ಪರದೆ ವೀಕ್ಷಣೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸ್ವೀಡನ್ ಸರ್ಕಾರ ಹೇಳಿಕೆ. 2 ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ ಪರದೆ ವೀಕ್ಷಿಸುವ ಸಮಯವನ್ನು ನಿಯಂತ್ರಣದಲ್ಲಿಡಿ ಎಂದು ಹೇಳಿದೆ.
ಸರ್ಕಾರವು ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎರಡರಿಂದ ಐದು ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಒಂದು ಗಂಟೆಯವರೆಗೆ ಸ್ಕ್ರೀನ್ ಸಮಯ ಸೀಮಿತವಾಗಿರಬೇಕು ಎಂದು ಹೇಳಿದೆ.
ಆರರಿಂದ ಹನ್ನೆರಡು ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಟೈಮಿಂಗ್ ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ನಿರ್ಬಂಧಿಸಬೇಕು. 13ರಿಂದ 18 ವರ್ಷ ವಯಸ್ಸಿನ ಮಕ್ಕಳು ಪ್ರತಿದಿನ ಎರಡರಿಂದ ಮೂರು ಗಂಟೆಗಳ ಪರದೆಯ ಬಳಕೆಯನ್ನು ಮೀರಬಾರದು ಎಂದು ತಿಳಿಸಿದೆ.
ಮಲಗುವಾಗ ಸ್ಮಾರ್ಟ್ಫೋನ್ ಅಥವಾ ಟಿವಿ ಪರದೆ ವೀಕ್ಷಿಸುವುದನ್ನು ನಿಯಂತ್ರಿಸಿ ಎಂದು ಹೇಳಿದೆ. ಮಕ್ಕಳು ಮಲಗುವ ಕೋಣೆಯಲ್ಲಿ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಇಡದಂತೆ ಕೇಳಿಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್