ಪರಿಸರಸ್ನೇಹಿ ಇಥನಾಲ್ ಮಿಶ್ರಿತ ಪೆಟ್ರೋಲ್​ನಿಂದಾಗಿ 99,014 ಕೋಟಿ ಉಳಿತಾಯ
ಶೇ. 20ರಷ್ಟು ಪರಿಸರಸ್ನೇಹಿ ಇಥನಾಲ್ ಮಿಶ್ರವಾಗಿರುವ ಪೆಟ್ರೋಲ್ ಅನ್ನು ಮಾರಾಟದ ಗುರಿ
Ethanol


ನವದೆಹಲಿ, 04 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಭಾರತದಲ್ಲಿ ಇಥನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಮಾರಾಟ ಮಾಡಲಾಗುತ್ತಿದೆ. ಇದು ಪೆಟ್ರೋಲ್ ಅನ್ನು ಹೆಚ್ಚು ಪರಿಸರಸ್ನೇಹಿಯನ್ನಾಗಿ ಮಾಡುತ್ತದೆ. ಈ ರೀತಿ ಪೆಟ್ರೋಲ್​ಗೆ ಇಥನಾಲ್ ಬೆರೆಸುವುದರಿಂದ ದೇಶದ ಖಜಾನೆಗೂ ಉತ್ತಮ ಎನಿಸುತ್ತದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಾರ ಪೆಟ್ರೋಲ್​ಗೆ ಇಥನಾಲ್ ಮಿಶ್ರಣ ಮಾಡುವ ಯೋಜನೆಯಿಂದಾಗಿ ಭಾರತಕ್ಕೆ ಬಹಳಷ್ಟು ಲಾಭವಾಗಿದೆ. 2014ರಿಂದೀಚೆ ವಿದೇಶಿ ವಿನಿಮಯದಲ್ಲಿ ಭಾರತಕ್ಕೆ ಉಳಿತಾಯವಾದ ಹಣದ ಮೊತ್ತ ಬರೋಬ್ಬರಿ 99,014 ಕೋಟಿ ರೂ. ಹೆಚ್ಚೂಕಡಿಮೆ ಒಂದು ಲಕ್ಷ ಕೋಟಿ ರೂನಷ್ಟು ಹಣವನ್ನು ಉಳಿಸಲು ಸಾಧ್ಯವಾಗಿದೆ. ಇಥನಾಲ್​ನಿಂದಾಗಿ 10 ವರ್ಷದಲ್ಲಿ 1.73 ಕೋಟಿ ಮೆಟ್ರಿಕ್ ಟನ್​ಗಳಷ್ಟು ಕಚ್ಛಾ ತೈಲ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಿದಂತಾಗಿದೆ. ಇದು ಫಾರೆಕ್ಸ್ ಉಳಿತಾಯಕ್ಕೆ ಕಾರಣವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಸರ್ಕಾರ ಇಥನಾಲ್ ಮಿಶ್ರಿತ ಪೆಟ್ರೋಲ್ ಸರಬರಾಜು ಮಾಡುವ ಯೋಜನೆ ಆರಂಭಿಸಿದಾಗ ಪೆಟ್ರೋಲ್​ಗೆ ಶೇ. 15ರಷ್ಟು ಇಥನಾಲ್ ಅನ್ನು ಬೆರೆಸುವ ಗುರಿ ಇಟ್ಟಿತ್ತು. ಈಗ ಆ ಗುರಿ ಮುಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಶೇ. 20ರಷ್ಟು ಇಥನಾಲ್ ಮಿಶ್ರವಾಗಿರುವ ಪೆಟ್ರೋಲ್ ಅನ್ನು ಮಾರಾಟ ಮಾಡುವ ಗುರಿ ಇಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಶೇ. 20 ಇಥನಾಲ್ ಮಿಶ್ರಿತ ಪೆಟ್ರೋಲ್ (ಇ20 ಪೆಟ್ರೋಲ್) ದೇಶಾದ್ಯಂತ 15,600 ಪೆಟ್ರೋಲ್ ಬಂಕ್​ಗಳಲ್ಲಿ ಲಭ್ಯ ಇದೆ. ಕುತೂಹಲ ಎಂದರೆ ಇ100 ಇಂಧನ ಕೂಡ ಮಾರುಕಟ್ಟೆಯಲ್ಲಿದೆ. ಇ100 ಎಂದರೆ ಶೇ. 93ರಷ್ಟು ಇಥನಾಲ್ ಮತ್ತು ಶೇ 5ರಷ್ಟು ಪೆಟ್ರೋಲ್ ಮತ್ತು ಶೇ. 1.5ರಷ್ಟು ಕೋ-ಸಾಲ್ವೆಂಟ್ ಮಿಶ್ರಣದ ಇಂಧನ ಇದಾಗಿದೆ. ಮುಂದಿನ ದಿನಗಳಲ್ಲಿ ಇ100 ಇಂಧನ ಬಹಳ ಸಾಮಾನ್ಯವಾಗಿ ಲಭ್ಯ ಇರುವ ಪೆಟ್ರೋಲ್ ಆಗಿರುತ್ತದೆ.

ಇಥನಾಲ್​ನಿಂದಾಗಿ ಪೆಟ್ರೋಲ್ ಬಳಕೆ ಸದ್ಯ ತುಸು ಕಡಿಮೆ ಆಗಿದೆ. ಇದರಿಂದ ಕಳೆದ ಒಂದು ದಶಕದಲ್ಲಿ ಕಡಿಮೆ ಆಗಿರುವ ಇಂಗಾಲ ಹೊರಸೂಸುವಿಕೆಯ ಪ್ರಮಾಣ 51.9 ಮಿಲಿಯನ್ ಮೆಟ್ರಿಕ್ ಟನ್​ನಷ್ಟು ಎಂದೆನ್ನಲಾಗಿದೆ. ಈಗ ಇ100 ಇಂಧನ ವ್ಯಾಪಕವಾಗಿ ಬಳಕೆಗೆ ಬಂದರೆ ಪೆಟ್ರೋಲ್, ಡೀಸಲ್ ವಾಹನಗಳಿಂದ ಪರಿಸರ ಮಾಲಿನ್ಯ ಗಣನೀಯವಾಗಿ ತಗ್ಗುವ ನಿರೀಕ್ಷೆ ಇದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande