ಮುಂಬೈ, 28ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಭಾರತದ ವಿದೇಶೀ ವಿನಿಮಯ ಮೀಸಲು ಸತತ ಆರನೇ ವಾರ ಮತ್ತಷ್ಟು ಹೆಚ್ಚಳ ಕಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ಶುಕ್ರವಾರ ಸಂಜೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಸೆಪ್ಟೆಂಬರ್ 20ರಂದು ಅಂತ್ಯಗೊಂಡ ವಾರದಲ್ಲಿ 2.84 ಬಿಲಿಯನ್ ಡಾಲರ್ನಷ್ಟು ನಿಧಿ ಹೆಚ್ಚಳವಾಗಿದೆ. ಇದರೊಂದಿಗೆ, ಭಾರತೀಯ ರಿಸರ್ವ್ ಬ್ಯಾಂಕ್ ನ ವಿದೇಶೀ ವಿನಿಮಯ ಮೀಸಲು ನಿಧಿ 692.3 ಬಿಲಿಯನ್ ಡಾಲರ್ ಆಗಿದೆ. ಇದು ಸಾರ್ವಕಾಲಿಕ ಗರಿಷ್ಠ ವಿದೇಶೀ ವಿನಿಮಯ ನಿಧಿಯಾಗಿದೆ. 700 ಬಿಲಿಯನ್ ಡಾಲರ್ ಮಟ್ಟದ ಮೈಲಿಗಲ್ಲಿಗೆ ಬಹಳ ಸಮೀಪ ಇದೆ.
ಆರು ವಾರಗಳಿಂದಲೂ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಸಂಪತ್ತು ಕ್ರೋಢೀಕರಣಗೊಳ್ಳುತ್ತಲೇ ಬಂದಿದೆ. ಹಿಂದಿನ ಐದು ವಾರದಲ್ಲಿ ಒಟ್ಟು 19.3 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿತ್ತು. ಸೆಪ್ಟೆಂಬರ್ 20ರ ವಾರದ್ದು ಪರಿಗಣಿಸಿದರೆ ಆರು ವಾರದಲ್ಲಿ ಏರಿಕೆ ಆದ ವಿದೇಶೀ ವಿನಿಮಯ ಮೀಸಲು ಸಂಪತ್ತು 22.14 ಬಿಲಿಯನ್ ಡಾಲರ್ನಷ್ಟು ಹೆಚ್ಚಳ ಕಂಡಿದೆ.
ಪಾಕಿಸ್ತಾನದ ವಿದೇಶೀ ವಿನಿಮಯ ಮೀಸಲು 10 ಬಿಲಿಯನ್ ಡಾಲರ್ ಸಮೀಪ
ಪಾಕಿಸ್ತಾನದ ವಿದೇಶೀ ವಿನಿಮಯ ಮೀಸಲು ಇತ್ತೀಚಿನ ವಾರದಲ್ಲಿ 24 ಮಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್ ಹೊಂದಿರುವ ವಿದೇಶೀ ವಿನಿಮಯ ಮೀಸಲು ಮೊತ್ತ 9.53 ಬಿಲಿಯನ್ ಡಾಲರ್ಗೆ ಏರಿದೆ. ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ವಿದೇಶೀ ವಿನಿಮಯ ಮೀಸಲು ಹೆಚ್ಚಳ ಸ್ವಾಗತಾರ್ಹವಾಗಿದೆ.
ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಬಳಿ 3.2 ಟ್ರಿಲಿಯನ್ ಡಾಲರ್ನಷ್ಟು ವಿದೇಶೀ ವಿನಿಮಯ ನಿಧಿ ಇದೆ. ಜಪಾನ್ ಬಳಿ 1.2 ಟ್ರಿಲಿಯನ್ ಡಾಲರ್ ಇದೆ. ಸ್ವಿಟ್ಜರ್ಲ್ಯಾಂಡ್ 802 ಬಿಲಿಯನ್ ಡಾಲರ್ನಷ್ಟು ವಿದೇಶೀ ವಿನಿಮಯ ಮೀಸಲು ಹೊಂದಿದೆ.
ಭಾರತದ ರುಪಾಯಿ ಚೇತರಿಕೆ
ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಇತ್ತೀಚೆಗೆ 50 ಮೂಲಾಂಕಗಳಷ್ಟು ಬಡ್ಡಿದರ ಕಡಿತಗೊಳಿಸಿದ ಪರಿಣಾಮವಾಗಿ ಭಾರತದ ರುಪಾಯಿ ಮೌಲ್ಯ ಚೇತರಿಸಿಕೊಂಡಿದೆ. ಭಾರತದ ಮಾರುಕಟ್ಟೆಗೆ ವಿದೇಶಗಳಿಂದ ಬಂಡವಾಳ ಹರಿದುಬರುತ್ತಿರುವುದೂ ಕೂಡ ರುಪಾಯಿ ಕರೆನ್ಸಿಗೆ ಬಲ ತಂದುಕೊಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್