ಹೆಣ್ಣು ಮಕ್ಕಳ ಹಣಕಾಸು ಸುರಕ್ಷತೆ ತರುವ ಸುಕನ್ಯ ಸಮೃದ್ಧಿ ಯೋಜನೆ
ನವದೆಹಲಿ, 27 ಸೆಪ್ಟೆಂಬರ್(ಹಿ.ಸ.) : ಆ್ಯಂಕರ್ : ಹೆಣ್ಣು ಮತ್ತು ಗಂಡು ಮಧ್ಯೆ ಬೌದ್ಧಿಕ ಅಂತರ ಉಳಿದಿಲ್ಲ. ಮೊದಲಿದ್ದಂತೆ ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತವಾಗಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಗಂಡಿಗೆ ಸರಿಸಮಾನವಾಗಿ ನಿಲ್ಲಲು ಹೆಣ್ಣು ನಿರಂತರ ಪ್ರಯತ್ನ ಮಾಡುತ್ತಿದ್ದಾಳೆ. ಹೆಣ್ಣು ಮಕ
ಸಮೃದ್ಧಿ ಯೋಜನೆ


ನವದೆಹಲಿ, 27 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ಹೆಣ್ಣು ಮತ್ತು ಗಂಡು ಮಧ್ಯೆ ಬೌದ್ಧಿಕ ಅಂತರ ಉಳಿದಿಲ್ಲ. ಮೊದಲಿದ್ದಂತೆ ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತವಾಗಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಗಂಡಿಗೆ ಸರಿಸಮಾನವಾಗಿ ನಿಲ್ಲಲು ಹೆಣ್ಣು ನಿರಂತರ ಪ್ರಯತ್ನ ಮಾಡುತ್ತಿದ್ದಾಳೆ. ಹೆಣ್ಣು ಮಕ್ಕಳು ಈಗ ಅಬಲೆಯಾಗಿ ಉಳಿದಿಲ್ಲ. ಸರ್ಕಾರ ಕೂಡ ವಿವಿಧ ಯೋಜನೆಗಳ ಮೂಲಕ ಹೆಣ್ಮಕ್ಕಳನ್ನು ಬಲಾಢ್ಯಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಭಾರತದ ಆರ್ಥಿಕತೆ ಅಗಾಧವಾಗಿ ಬೆಳೆಯಲು ಶುರುವಾಗಿರುವ ಈ ಹೊತ್ತಲ್ಲಿ ಮತ್ತು ಮುಂಬರುವ ವರ್ಷಗಳಲ್ಲಿ ದೇಶದ ಉನ್ನತಿಗೆ ಹೆಣ್ಣು ಮಕ್ಕಳ ಪಾತ್ರ ಬಹಳ ಮಹತ್ತರದ್ದು. ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಇತ್ತೀಚೆಗೆ (ಸೆ. 22) ಆಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಣ್ಣು ಮಕ್ಕಳಿಗೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಇರುವ ಒಂದು ಪುಟ್ಟ ಕೈಪಿಡಿಯನ್ನು ನಿನ್ನೆ ಗುರುವಾರ ಸಂಜೆ ಪತ್ರಿಕಾ ಪ್ರಕಟಣೆಯ ಮೂಲಕ ಬಿಡುಗಡೆ ಮಾಡಿದೆ.

ಹೆಣ್ಮಗುವಿನ ಅಭ್ಯುದಯಕ್ಕಾಗಿ ಸರ್ಕಾರ ಕೈಗೊಂಡಿರುವ ಯೋಜನೆಗಳೇನು ಎಂಬ ವಿವರ ಇಲ್ಲಿದೆ. ಅದರಲ್ಲೂ ಸುಕನ್ಯ ಸಮೃದ್ಧಿ ಯೋಜನೆ ಶುರುವಾಗಿ ಹತ್ತಿರ ಹತ್ತಿರ 10 ವರ್ಷಗಳಾಗುತ್ತಿವೆ. ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಪೈಕಿ ಸುಕನ್ಯ ಸಮೃದ್ಧಿ ಯೋಜನಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಈವರೆಗೆ ಈ ಯೋಜನೆ ಅಡಿಯಲ್ಲಿ ಮೂರು ಕೋಟಿಗೂ ಹೆಚ್ಚು ಖಾತೆಗಳು ತೆರೆಯಲಾಗಿವೆ. ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಭಾಗವಾಗಿ ಪಿಎಂ ಎಸ್​ಎಸ್​ವೈ ಯೋಜನೆ ಆರಂಭಿಸಲಾಗಿತ್ತು. ಹತ್ತು ವರ್ಷದಲ್ಲಿ ಸಾಕಷ್ಟು ಜನರನ್ನು ಇದು ಸೆಳೆದಿರುವುದು ಗಮನಾರ್ಹ ಸಂಗತಿ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ?

2015ರ ಜನವರಿಯಲ್ಲಿ ಆರಂಭಿಸಲಾದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 10 ವರ್ಷದವರೆಗಿನ ಹೆಣ್ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದು. 21 ವರ್ಷಕ್ಕೆ ಈ ಅಕೌಂಟ್ ಮೆಚ್ಯೂರ್ ಆಗುತ್ತದೆ. ಒಂದು ವರ್ಷದಲ್ಲಿ ಕನಿಷ್ಠ ಹೂಡಿಕೆ 250 ರೂ ಇದೆ. ಗರಿಷ್ಠ ಒಂದೂವರೆ ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ಈ ರೀತಿ 21 ವರ್ಷ ಕಾಲ ಹೂಡಿಕೆಗೆ ಅವಕಾಶ ಇದೆ.

ಸದ್ಯಕ್ಕೆ ಸರ್ಕಾರ ಈ ಯೋಜನೆಯಲ್ಲಿ ವಾರ್ಷಿಕ ಶೇ. 8.2ರಷ್ಟು ಬಡ್ಡಿ ನೀಡುತ್ತದೆ. ಮಾಸಿಕವಾಗಿ ಬಡ್ಡಿದರ ಲೆಕ್ಕ ಮಾಡಲಾಗುತ್ತದಾದರೂ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಗೆ ಬಡ್ಡಿ ಜಮೆ ಮಾಡಲಾಗುತ್ತದೆ. ಬಡ್ಡಿದರ ಶೇ. 8.2ರಲ್ಲೇ ಮುಂದುವರಿಯುತ್ತದೆ ಎನ್ನಲಾಗುವುದಿಲ್ಲ. ಪ್ರತೀ ತ್ರೈಮಾಸಿಕದಲ್ಲಿಯೂ ಸಹ ಬಡ್ಡಿದರ ಪರಿಷ್ಕರಿಸಲಾಗುತ್ತದೆ. ಕಳೆದ 10 ವರ್ಷದಲ್ಲಿ ಇದರ ಬಡ್ಡಿದರ ಕನಿಷ್ಠ ಶೇ. 7.6ರಿಂದ ಗರಿಷ್ಠ ಶೇ. 9.2ರವರೆಗೂ ಹೋಗಿತ್ತು.

ಮಧ್ಯದಲ್ಲೇ ಹಿಂಪಡೆಯುವಿಕೆ ಮಾಡಲು, ಖಾತೆಯನ್ನು ಮುಚ್ಚಲು ಅವಕಾಶ

ಹೆಣ್ಮಗುವಿನ ಶಿಕ್ಷಣ, ಮದುವೆ ಇತ್ಯಾದಿ ಉದ್ದೇಶಕ್ಕೆ ಸುಕನ್ಯ ಸಮೃದ್ಧಿ ಅಕೌಂಟ್​ನಿಂದ ಒಂದು ಭಾಗದ ಹಣವನ್ನು ಹಿಂಪಡೆಯಲು ಅವಕಾಶ ಇದೆ. ಹೆಣ್ಮಗುವಿನ ವಯಸ್ಸು 18 ವರ್ಷ ತುಂಬಿದಾಗ ಅಥವಾ ಆಕೆ 10ನೇ ತರಗತಿ ಪೂರ್ಣಗೊಳಿಸಿದಾಗ ಹಿಂಪಡೆಯುವಿಕೆ ಮಾಡಬಹುದು. ಹಿಂದಿನ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯಲ್ಲಿ ಎಷ್ಟು ಬ್ಯಾಲನ್ಸ್ ಇರುತ್ತೋ ಅದರ ಅರ್ಧದಷ್ಟು ಮೊತ್ತವನ್ನು ಮಾತ್ರವೇ ಹಿಂಪಡೆಯುವಿಕೆ ಮಾಡಲು ಸಾಧ್ಯ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆಗೆ ಎಷ್ಟು ಲಾಭ ಸಿಗುತ್ತೆ?

ನೀವು ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆದು ವರ್ಷಕ್ಕೆ ಗರಿಷ್ಠ ಮೊತ್ತವಾದ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದರೆ, 21 ವರ್ಷದ ಬಳಿಕ ನಿಮ್ಮ ಒಟ್ಟಾರೆ ಹೂಡಿಕೆ 22.5 ಲಕ್ಷ ರೂ ಇರುತ್ತದೆ. ಬಡ್ಡಿ ಸೇರಿ ನಿಮಗೆ ಸಿಗುವ ಒಟ್ಟು ಮೊತ್ತ 70 ಲಕ್ಷ ಸಮೀಪ ಆಗಬಹುದು. ಇದು ಶೇ. 8.2ರಷ್ಟಿರುವ ಬಡ್ಡಿದರದಲ್ಲಿ ಮಾಡಿದ ಲೆಕ್ಕಾಚಾರ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande