ಬೆಂಗಳೂರು, 1 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಗರದ ಜಾಲಹಳ್ಳಿಯ ಕುವೆಂಪು ವೃತ್ತದ ಅಂಡರ್ ಪಾಸ್ನಲ್ಲಿ ಮುಷ್ಟಿಗಟ್ಟಲೇ ಮೊಳೆಗಳು ಪತ್ತೆಯಾಗಿವೆ. ವಾಹನಗಳು ಪಂಕ್ಚರ್ ಆಗಲೆಂದೇ ಕಿಡಿಗೇಡಿಗಳು ರಸ್ತೆಯಲ್ಲಿ ಮೊಳೆ ಎಸೆದು ಹಣ ಮಾಡುವ ದಂಧೆಗಿಳಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿವೆ. ಮೊಳೆಗಳು ರಸ್ತೆ ಮೇಲೆ ಬಿದ್ದಿರುವುದರ ಹಿಂದೆ ಸುತ್ತಮುತ್ತಲಿನ ಪಂಕ್ಚರ್ ಶಾಪ್ಗಳ ಕೈವಾಡವಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಇದನ್ನು ಸಂಚಾರ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.
ಬೆಂಗಳೂರಿನ ಹೆಬ್ಬಾಳ-ಗೊರಗುಂಟೆಪಾಳ್ಯ ಹೊರವರ್ತುಲ ರಸ್ತೆಯ ಕುವೆಂಪು ವೃತ್ತದ ಕೆಳಸೇತುವೆಯಲ್ಲಿ ಸುಮಾರು 500 ಗ್ರಾಂ ಮೊಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹಿನ್ನೆಲೆಯಲ್ಲಿ ಜಾಲಹಳ್ಳಿ ಸಂಚಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಹೊಸದಾಗಿ ಕಾಣುವ ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಎಸೆದಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮಹಿಳಾ ಪೊಲೀಸ್ ಪೇದೆ ಸೇರಿದಂತೆ ಇಬ್ಬರು ಸಿಬ್ಬಂದಿ ಮೊಳೆ ತೆಗೆಯುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಜಾಲಹಳ್ಳಿ ಸಂಚಾರಿ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಹುಷಾರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಮಧ್ಯದಲ್ಲಿ ಮೊಳೆಗಳನ್ನು ಎಸೆದು ವಾಹನಗಳ ಪಂಕ್ಚರ್ ಆಗುವಂತೆ ಮಾಡಲಾಗುತ್ತಿದೆ ಎಂಬ ವದಂತಿ ಬೆಂಗಳೂರಿನಲ್ಲಿ ಮೊದಲಿನಿಂದಲೂ ಇದೆ. ಇದೀಗ ಸ್ವತಃ ಸಂಚಾರ ಪೊಲೀಸರೇ ರಸ್ತೆ ಮೇಲೆ ಬಿದ್ದಿದ್ದ ರಾಶಿಗಟ್ಟಲೆ ಮೊಳೆಗಳನ್ನು ಗಮನಿಸಿ ಸ್ವಚ್ಛಗೊಳಸಿದ್ದಾರೆ. ಈ ಮೂಲಕ ಇದೊಂದು ದಂಧೆ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಮೊಳೆಗಳು ರಸ್ತೆ ಮೇಲೆ ಬಿದ್ದಿರುವುದರ ಹಿಂದೆ ಸುತ್ತಮುತ್ತಲಿನ ಪಂಕ್ಚರ್ ಶಾಪ್ಗಳ ಕೈವಾಡವಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಸದ್ಯ ಮಹಿಳಾ ಸಂಚಾರ ಪೊಲೀಸರೊಬ್ಬರು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೊಳೆಗಳನ್ನು ಹೆಕ್ಕಿ ತೆಗೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಂಚಾರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ