ಬೆಂಗಳೂರು, 29 ಜುಲೈ (ಹಿ.ಸ.):
ಆ್ಯಂಕರ್ : ಪ್ರತಿ ವರ್ಷವೂ ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಕೆ ಮಾಡಿ ಬರೆ ಎಳೆಯಲು ಮುಂದಾಗುತ್ತಿವೆ. ಹೀಗಾಗಿ ಕಂಗಾಲಾಗಿರುವ ಪೋಷಕರು ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಕಾಯ್ದೆ ಜಾರಿ ಮಾಡುವಂತೆ ಒತ್ತಾಯ ಶುರು ಮಾಡಿದ್ದರು. ನಂತರ ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆ, ಶುಲ್ಕ ವಿವರವನ್ನು ಶಾಲೆಗಳಲ್ಲಿ ಘೋಷಣೆ ಮಾಡಬೇಕು. ಶಾಲೆಗಳ ವೆಬ್ಸೈಟ್ನಲ್ಲಿ ಪ್ರಕಟ ಮಾಡಬೇಕು ಎಂದು ಸೂಚಿಸಿತ್ತು. ಆದರೆ ಖಾಸಗಿ ಶಾಲೆಗಳು ಇದನ್ನು ಕ್ಯಾರೇ ಮಾಡುತ್ತಿಲ್ಲ. ಶುಲ್ಕ ಮಾಹಿತಿ ಪ್ರಕಟಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರದ ಸುತ್ತೋಲೆಗೆ ಕವಡೆ ಕಾಸಿನ ಬೆಲೆ ನೀಡಿದ ಖಾಸಗಿ ಶಾಲೆಗಳು ವಿರುದ್ಧ ಪೋಷಕರು ಗರಂ ಆಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಆದೇಶದಲ್ಲೇನಿದೆ?
ಶುಲ್ಕ ವಿವರವನ್ನು ಶಾಲೆಗಳ ವೆಬ್ಸೈಟ್ನಲ್ಲಿ ಪ್ರಕಟ ಮಾಡಬೇಕು. ಯಾವ ಶಾಲೆಗಳು ಶುಲ್ಕದ ವಿವರವನ್ನು ಎಸ್ ಎ ಟಿ ಎಸ್ ಪೋರ್ಟ್ , ವೆಬ್ಸೈಟ್ ಹಾಗೂ ಶಾಲೆಯಲ್ಲಿ ಅಳವಡಿಸುವುದಿಲ್ಲವೋ ಆ ಶಾಲೆಗಳ ಆರ್ಆರ್ ನವೀಕರಣ ಮಾಡದಂತೆ ರಾಜ್ಯದ ಎಲ್ಲ ಬಿಇಒ ಹಾಗೂ ಡಿಡಿಪಿಐಗಳಿಗೆ ಶಾಲಾ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದೆ. ಇಷ್ಟಾದರೂ ಯಾವುದೇ ಖಾಸಗಿ ಶಾಲೆಗಳು ಮಾಹಿತಿ ಪ್ರಕಟಿಸುತ್ತಿಲ್ಲ.
ಇದುವರೆಗೂ ರಾಜ್ಯದಲ್ಲಿ ಶೇ 5ರಷ್ಟು ಖಾಸಗಿ ಶಾಲೆಗಳು ಮಾತ್ರ ಶುಲ್ಕದ ಮಾಹಿತಿ ಪ್ರಕಟಿಸಿವೆ. ಹೀಗಾಗಿ ಇತಂಹ ಶಾಲೆಗಳ ಆರ್ಆರ್ ನವೀಕರಣ ಮಾಡದಂತೆ ರಾಜ್ಯ ಪೋಷಕರ ಸಮನ್ವಯ ಸಮಿತಿ ಒತ್ತಾಯಿಸಿದೆ ಎಂದು ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ತಿಳಿಸಿದ್ದಾರೆ.
ಪೋಷಕರು ಶುಲ್ಕ ವಿವರ ನೀಡದ ಶಾಲೆಗಳ ಮಾನ್ಯತೆ ರದ್ದತಿಗೆ ಒತ್ತಾಯ ಮಾಡಿದ್ದು, ಎಸ್ ಎ ಟಿ ಎಸ್ ಪೋರ್ಟ್ ನಲ್ಲಿ ಮಾಹಿತಿ ನೀಡದ ಶಾಲೆಗಳ ಆರ್ಆರ್ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಶಾಲಾ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಇನ್ನು ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಮಾತ್ರ ಶಾಲಾ ಶಿಕ್ಷಣ ಇಲಾಖೆಯ ಆದೇಶ ಸ್ವಾಗತರ್ಹ. ನಾವು ಶುಲ್ಕದ ವಿವರವನ್ನ ಘೋಷಣೆ ಮಾಡಿ ವೆಬ್ಸೈಟ್ನಲ್ಲಿ ಪ್ರಕಟಿಸುತ್ತೇವೆ ಎಂದಿದೆ. ಈ ಬಗ್ಗೆ ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ