ನವದೆಹಲಿ, 25 ಜುಲೈ (ಹಿ.ಸ.):
ಆ್ಯಂಕರ್ : ಮುಂಗಡ ಪತ್ರದಲ್ಲಿ ಸರ್ಕಾರ ಇಂಟರ್ನ್ಶಿಪ್ ಯೋಜನೆಯನ್ನು ಪ್ರಕಟಿಸಿದೆ. ಒಂದು ವರ್ಷದ ಈ ಯೋಜನೆಯಲ್ಲಿ 21ರಿಂದ 24 ವರ್ಷದ ವಯೋಮಾನದ ಯುವಕರಿಗೆ ತಿಂಗಳಿಗೆ 5,000 ರೂ ಪ್ರೋತ್ಸಾಹ ಧನವನ್ನು ಸರ್ಕಾರವೇ ನೀಡುತ್ತದೆ.
ಈ ಯೋಜನೆಯಲ್ಲಿ ಮೂಲಕ 5 ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಕೌಶಲ್ಯ ವೃದ್ಧಿಸುವ ಅವಕಾಶ ಕಲ್ಪಿಸುವುದು ಸರ್ಕಾರದ ಹೆಗ್ಗುರಿಯಾಗಿದೆ. ಭಾರತದ ಆರ್ಥಿಕತೆ ಬಹಳ ವೇಗವಾಗಿ ಬೆಳೆಯುತ್ತಿರುವುದರಿಂದ ಕೌಶಲ್ಯವಂತ ಕೆಲಸಗಾರರು ಅಥವಾ ಉದ್ಯೋಗಿಗಳು ಅವಶ್ಯಕತೆ ಬಹಳ ಇದೆ. ಈ ಕಾರಣಕ್ಕೆ ಯುವ ಸಮುದಾಯಕ್ಕೆ ವರ್ಕ್ ಸ್ಕಿಲ್ ತರಲು ಈ ಇಂಟರ್ನ್ಶಿಪ್ ಸ್ಕೀಮ್ ಸಹಾಯವಾಗುವ ನಿರೀಕ್ಷೆ ಇದೆ.
ಇಂಟರ್ನ್ಶಿಪ್ ಯೋಜನೆಗೆ ಯಾರು ಅರ್ಜಿ ಹಾಕಬಹುದು?
ಸರ್ಕಾರ ದೊಡ್ಡ 500 ಕಂಪನಿಗಳನ್ನು ಈ ಇಂಟರ್ನ್ಶಿಪ್ ಯೋಜನೆಗೆ ಬಳಸಿಕೊಳ್ಳಲಿದೆ. ಓದು ಮುಗಿಸಿರುವ ಮತ್ತು ಇನ್ನೂ ಎಲ್ಲಿಯೂ ಕೆಲಸಕ್ಕೆ ಸೇರದ 21 ವರ್ಷದಿಂದ 24 ವರ್ಷ ವಯೋಮಾನದ ಯುವಕ ಮತ್ತು ಯುವತಿಯರು ಈ ಯೋಜನೆಗೆ ಅರ್ಹರಿರುತ್ತಾರೆ. ಈ ಅಭ್ಯರ್ಥಿಗಳ ಕುಟುಂಬದ ಇತರ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿರುವಂತಿಲ್ಲ, ಸರ್ಕಾರಿ ಉದ್ಯೋಗಿಯಾಗಿರುವಂತಿಲ್ಲ. ಅಭ್ಯರ್ಥಿಗಳು ಐಐಟಿ ಅಥವಾ ಐಐಎಂ ಅಥವಾ ಸಿಎ, ಸಿಎಂಎ, ಐಐಸ್ಇಆರ್ ಇತ್ಯಾದಿ ಸಂಸ್ಥೆಗಳಲ್ಲಿ ವೃತ್ತಿಪರ ಶಿಕ್ಷಣ ಪಡೆದಿರುವಂತಿಲ್ಲ. ಒಟ್ಟಾರೆ, ಬಡವರು ಮತ್ತು ಉದ್ಯೋಗ ಗಿಟ್ಟಿಸುವ ಸಾಧ್ಯತೆ ಕಡಿಮೆ ಇರುವಂತಹ ಅಭ್ಯರ್ಥಿಗಳನ್ನು ಆಯ್ದುಕೊಂಡು ಅವರಿಗೆ ಕೌಶಲ್ಯ ವೃದ್ಧಿಸುವುದು ಸರ್ಕಾರದ ಗುರಿ ಇದ್ದಂತಿದೆ.
ಸರ್ಕಾರದಿಂದ ಮಾಸಿಕವಾಗಿ 5,000 ರೂ
12 ತಿಂಗಳ ಅವಧಿಯ ಈ ಇಂಟರ್ನ್ಶಿಪ್ ಅಥವಾ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗೆ ತಿಂಗಳಿಗೆ 5,000 ರೂ ಭತ್ಯೆ ಸಿಗುತ್ತದೆ. ಒಂದು ವರ್ಷದಲ್ಲಿ ಒಟ್ಟಾರೆ 66,000 ರೂ ಭತ್ಯೆಯು ಒಬ್ಬರಿಗೆ ಸಿಗುತ್ತದೆ. ಇದರಲ್ಲಿ ಸರ್ಕಾರ ಮಾಸಿಕ ಭತ್ಯೆಯಾಗಿ ಒಟ್ಟು 54,000 ರೂ ಒದಗಿಸುತ್ತದೆ. ಅನಿರೀಕ್ಷಿತ ವೆಚ್ಚಗಳಿಗೆಂದು 6,000 ರೂ ನೀಡುತ್ತದೆ. ಕಂಪನಿಗಳೂ ಕೂಡ ಒಬ್ಬ ಇಂಟರ್ನ್ಗೆ ತರಬೇತಿ ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ 6,000 ರೂ ಕೊಡಬೇಕಾಗುತ್ತದೆ. ಅಲ್ಲಿಗೆ ಇಂಟರ್ನ್ಶಿಪ್ ಮಾಡುವ ಯುವಕನೊಬ್ಬನಿಗೆ ಉಚಿತವಾಗಿ ತರಬೇತಿ ಸಿಗುವುದರ ಜೊತೆಗೆ ಒಟ್ಟಾರೆ 66,000 ರೂ ಪ್ರೋತ್ಸಾಹ ಧನ ಕೂಡ ಲಭಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ