ಬೆಂಗಳೂರು, 21 ಜುಲೈ (ಹಿ.ಸ.) :
ಆ್ಯಂಕರ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ಡಾ: ಪುನೀತ್ ರಾಜ್ ಕುಮಾರ್ ಸೇವಾ ಕೇಂದ್ರ , ನಂದಿನಿ ಲೇಔಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಔಷಧಿಗಳನ್ನು ವಿತರಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ಖರ್ಗೆಯವರು ದೇಶ ಕಂಡ ಅಪರೂಪದ ರಾಜಕಾರಣಿ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಯವರು, ತಮ್ಮ 50 ವರ್ಷದ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಎನಿಸಿಕೊಂಡಿದ್ದಾರೆ. ಅವರು ರಾಜ್ಯ ಹಾಗೂ ರಾಷ್ಟ್ರ ಕಂಡ ವಿಶಿಷ್ಟ ರಾಜಕಾರಣಿ ಹಾಗೂ ದೇಶದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿಷ್ಕಳಂಕ, ನೇರ ನಡೆ, ನುಡಿಯ ನಾಯಕರಾಗಿದ್ದಾರೆ . ಕೆಪಿಸಿಸಿ ಅಧ್ಯಕ್ಷರಾಗಿ, ರಾಜ್ಯ ಹಾಗೂ ಕೇಂದ್ರದ ಸಚಿವರಾಗಿ, ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿ, ರಾಜ್ಯ ಸಭೆಯ ಪ್ರತಿ ಪಕ್ಷದ ನಾಯಕರಾಗಿ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬಿದ್ದಾರೆ ಎಂದು ಹೇಳಿದರು.
ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ, ರಾಜ್ಯ ಸಭೆಯ ಪ್ರತಿ ಪಕ್ಷದ ನಾಯಕರಾಗಿ ಪಕ್ಷ ಸಂಘಟನೆ ಮಾಡುತ್ತಾ ನರೇಂದ್ರ ಮೋದಿ ಸರ್ಕಾರಕ್ಕೆ ಸಿಂಹ ಸ್ವಪ್ನರಾಗಿದ್ದಾರೆ. ಜಾತ್ಯತೀತ ರಾಜಕಾರಣ, ಪ್ರಗತಿ, ಸಿದ್ಧಾಂತಗಳಿಗೆ ಬದ್ದರಾಗಿ, ರಾಜಕಾರಣದುದ್ದಕ್ಕೂ ಜನಪರ ಕಾಳಜಿ ಇರಿಸಿಕೊಂಡು ಬಂದಂತಹ ಖರ್ಗೆ ಯವರು ನಮ್ಮಂತಹ ರಾಜಕಾರಣಿಗಳಿಗೆ ಸ್ಪೂರ್ತಿ ಎಂದು ಸಲೀಂ ಅಹ್ಮದ್ ರವರು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಮಾಜಿ ಕಾರ್ಪೋರೇಟರ್ ಕೇಶವಮೂರ್ತಿ , ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಆರಾಧ್ಯ, ಮಾಜಿ ಮಹಾಪೌರ ಹುಚ್ಚಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಸುಧೀಂದ್ರ ಸೇರಿದಂತೆ ಪಕ್ಷದ ಮುಖಂಡರುಗಳು ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ