ನವದೆಹಲಿ, 19 ಜುಲೈ (ಹಿ.ಸ.) :
ಆ್ಯಂಕರ್ : ರಿಸರ್ವೇಶನ್ ಕೋಚ್ನಲ್ಲಿ ಕನ್ಫರ್ಮ್ಡ್ ಟಿಕೆಟ್ ಇಲ್ಲದವರೂ ನುಗ್ಗಿ ಅಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಬಹಳಷ್ಟು ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಸ್ಲೀಪರ್ ಕೋಚ್ನಲ್ಲಿ ಬೇರೆಯವರು ಟಿಕೆಟ್ ಬುಕ್ ಮಾಡಿದ ಸೀಟ್ನಲ್ಲಿ ಕೂರುವುದು, ಅಲ್ಲಿಯೇ ನಿಲ್ಲುವುದು ಇತ್ಯಾದಿ ಘಟನೆಗಳು ರೈಲು ಪ್ರಯಾಣ ಕಿರಿಕಿರಿಯಾಗುವಂತೆ ಮಾಡುತ್ತವೆ. ಇದನ್ನು ತಪ್ಪಿಸಲು ರೈಲ್ವೆ ಇಲಾಖೆ ಹೊಸ ನಿಯಮ ರೂಪಿಸಿದೆ. ಟಿಕೆಟ್ ಬುಕ್ ಮಾಡಿ ಇನ್ನೂ ಕನ್ಫರ್ಮ್ ಆಗದೆ ವೇಟಿಂಗ್ ಟಿಕೆಟ್ ಹೊಂದಿರುವ ಪ್ರಯಾಣಿಕರು ರಿಸರ್ವೇಶನ್ ಕೋಚ್ಗೆಯೇ ಕಾಲಿಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ವೇಟಿಂಗ್ ಟಿಕೆಟ್ ಹೊಂದಿರುವವರು ರಿಸರ್ವ್ಡ್ ಕೋಚ್ಗೆ ಹೋದರೆ ಏನಾಗುತ್ತೆ?
ಕನ್ಫರ್ಡ್ ಇಲ್ಲದ ಟಿಕೆಟ್ ಇಟ್ಟುಕೊಂಡು ರಿಸರ್ವ್ಡ್ ಬೋಗಿಗೆ ಹೋಗುವಂತಿಲ್ಲ. ಹಾಗೊಂದು ವೇಳೆ ಹೋದರೆ ಅವರು ಭಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ. ಹಾಗೂ ಮುಂದಿನ ನಿಲ್ದಾಣದಲ್ಲೇ ಅವರನ್ನು ಕೆಳಗೆ ಇಳಿಸಲಾಗುತ್ತದೆ. ದಂಡದ ಮೊತ್ತ ಕನಿಷ್ಠ 440 ರೂ ಇರುತ್ತದೆ.ರೈಲು ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಿ ಖರೀದಿಸಬಹುದು. ಆಫ್ಲೈನ್ನಲ್ಲಿ ಕೌಂಟರ್ನಲ್ಲಿ ಟಿಕೆಟ್ ಪಡೆಯಬಹುದು. ಕೌಂಟರ್ನಲ್ಲಿ ಟಿಕೆಟ್ ಪಡೆಯುವಾಗ ಕನ್ಫರ್ಮ್ಡ್ ಟಿಕೆಟ್ ಇಲ್ಲದಿದ್ದರೆ ವೇಟಿಂಗ್ ಟಿಕೆಟ್ ಪಡೆಯುವ ಆಯ್ಕೆ ಇರುತ್ತದೆ. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುವಾಗಲೂ ಕನ್ಫರ್ಮ್ಡ್ ಸೀಟು ಇಲ್ಲದಿದ್ದರೆ ವೇಟಿಂಗ್ ಟಿಕೆಟ್ ಪಡೆಯಬಹುದು. ಒಂದು ವೇಳೆ ರೈಲು ಪ್ರಯಾಣದ ದಿನವೂ ಈ ವೇಟಿಂಗ್ ಟಿಕೆಟ್ ಕನ್ಫರ್ಮ್ ಆಗಲಿಲ್ಲವೆಂದರೆ ಹಣ ರೀಫಂಡ್ ಆಗುತ್ತದೆ.
ರೈಲು ಟ್ರಿಪ್ ಸಂಖ್ಯೆ ಶೇ. 30ರಷ್ಟು ಹೆಚ್ಚಾದರೆ ವೇಟ್ಲಿಸ್ಟಿಂಗ್ ಬಹುತೇಕ ಸೊನ್ನೆಗೆ ಬರುತ್ತದೆ. ಬುಕ್ ಮಾಡಿದ ಬಹುತೇಕ ಎಲ್ಲಾ ಟಿಕೆಟ್ಗಳು ಕನ್ಫರ್ಮ್ಡ್ ಟಿಕೆಟ್ ಆಗಿರುತ್ತವೆ. ವೇಟಿಂಗ್ ಟಿಕೆಟ್ ಇಟ್ಟುಕೊಂಡು ಆತಂಕದಲ್ಲಿ ಕಾಲ ಕಳೆಯಬೇಕಾದ ಪ್ರಮೇಯ ಕಡಿಮೆ ಆಗಬಹುದು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ