ಕೊಲಂಬೊ, 19 ಜುಲೈ (ಹಿ.ಸ.) :
ಆ್ಯಂಕರ್ : ಶ್ರೀಲಂಕಾದಲ್ಲಿ ಇಂದಿನಿಂದ ಮಹಿಳೆಯರ ಏಷ್ಯಾ ಕಪ್ ಟಿ-೨೦ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಭಾರತ ತಂಡದ ವನಿತೆಯರು, ದಾಂಬುಲಾದಲ್ಲಿ ಇಂದು ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಭಾರತೀಯ ಕಾಲಮಾನ ರಾತ್ರಿ ೭ ಗಂಟೆಗೆ ಪಂದ್ಯ ಆರಂಭವಾಗಲಿದೆ.
ಇದಕ್ಕೂ ಮುನ್ನ ಮಧ್ಯಾಹ್ನ ೨ ಗಂಟೆಗೆ ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಎ’ ಗುಂಪಿನ ತಂಡಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿವೆ.
ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ೯ನೇ ಆವೃತ್ತಿಯ ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದು, ತಲಾ ೪ ತಂಡಗಳಂತೆ ಎರಡು ಗುಂಪುಗಳಲ್ಲಿ ವಿಭಜಿಸಲಾಗಿದೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, ಎ” ಗುಂಪಿನಲ್ಲಿ ಪಾಕಿಸ್ತಾನ, ನೇಪಾಳ ಮತ್ತು ಯುಎಇ ತಂಡಗಳ ಜತೆ ಸ್ಥಾನ ಹೊಂದಿದೆ.
ಇನ್ನು ಬಿ” ಗುಂಪಿನಲ್ಲಿ ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಮಲೇಷಿಯಾ ತಂಡಗಳು ಸ್ಥಾನ ಪಡೆದಿವೆ.
ತಲಾ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್ಸ್ ಹಂತಕ್ಕೆ ಅರ್ಹತೆ ಪಡೆಯಲಿವೆ.
ಜುಲೈ ೨೬ರಂದು ಈ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಇದೇ ೨೮ರಂದು ರಂಗಿರಿ ದಾಂಬುಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಜರುಗಲಿದೆ.
ಭಾರತ ತಂಡದ ಮಹಿಳೆಯರು ಒಟ್ಟು ಏಳು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿದ್ದು, ಕಳೆದ ಬಾರಿ ೨೦೨೨ರಲ್ಲಿ ಈ ಸಾಧನೆ ಮಾಡಿದ್ದರು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ