ನಮ್ಮ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲಿ- ಡಿ.ಕೆ ಶಿವಕುಮಾರ್
ಬೆಂಗಳೂರು , 20 ಏಪ್ರಿಲ್ (ಹಿ.ಸ):ಆ್ಯಂಕರ್: “ಮೋದಿಯವರು ಕರ್ನಾಟಕಕ್ಕೆ ಚೊಂಬನ್ನ ಕೊಟ್ಟಿದ್ದಾರೆ. ರಾಜ್ಯದ ನೀರಾವರಿ, ಅ
ನಮ್ಮ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲಿ- ಡಿ.ಕೆ ಶಿವಕುಮಾರ್


ಬೆಂಗಳೂರು , 20 ಏಪ್ರಿಲ್ (ಹಿ.ಸ):ಆ್ಯಂಕರ್:

“ಮೋದಿಯವರು ಕರ್ನಾಟಕಕ್ಕೆ ಚೊಂಬನ್ನ ಕೊಟ್ಟಿದ್ದಾರೆ. ರಾಜ್ಯದ ನೀರಾವರಿ, ಅಭಿವೃದ್ಧಿ, ಅನುದಾನ ತಾರತಮ್ಯ ವಿಚಾರವಾಗಿ ನಾವು ಕೇಳಿರುವ ಪ್ರಶ್ನೆಗಳಿಗೆ ಅವರು ಮೊದಲು ಉತ್ತರಿಸಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು;

ಇಂದು ಬೆಂಗಳೂರಿಗೆ ಪ್ರಧಾನಮಂತ್ರಿಗಳ ಆಗಮನದ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು:

ಪ್ರಧಾನಮಂತ್ರಿಗಳು ನಮ್ಮ ತೆರಿಗೆ ನಮ್ಮ ಹಕ್ಕಿನ ಬಗ್ಗೆ ಮಾತನಾಡಲಿ. ಬರ ಪರಿಹಾರದ ಹಣ ಯಾಕೆ ನೀಡಿಲ್ಲ, ಮಹದಾಯಿ, ಮೇಕೆದಾಟು ಯೋಜನೆಗೆ ಅನುಮತಿ ಹಾಗೂ ಭದ್ರಾ ಮೇಲ್ದಂಡೆಗೆ ಮೀಸಲಿಟ್ಟಿದ್ದ ಹಣದ ಬಿಡುಗಡೆ ಯಾವಾಗ? ಎಂಬ ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಹಾಗೂ ಲವ್ ಜಿಹಾದ್ ನಡೆಯುತ್ತಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ನಾವು ಯಾರ ಪರವಾಗಿ ಲಾಭಿ ಮಾಡುವ ಪ್ರಶ್ನೆಯೇ ಇಲ್ಲ. ಕಾನೂನು ಪ್ರಕಾರ ಏನು ನಡೆಯಬೇಕೊ ಅದು ನಡೆಯುತ್ತದೆ” ಎಂದರು.

ಕಾನೂನು ಪ್ರಕಾರ ಒದ್ದು ಒಳಗೆ ಹಾಕುತ್ತಾರೆ. ಗೃಹ ಸಚಿವರು ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದಾರೆ. ಯಾರ ಮೇಲೂ ಯಾವುದೇ ಕಾರಣಕ್ಕೂ ಕರುಣೆ ಎಂಬುದಿಲ್ಲ. ಅಲ್ಪಸಂಖ್ಯಾತ ನಾಯಕರೂ ಇದರ ಬಗ್ಗೆ ಮಾತನಾಡಿದ್ದಾರೆ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ಸರಣಿ ಆರೋಪಗಳಿಗೆ ತಿರುಗೇಟು ನೀಡಿದ ಡಿಸಿಎಂ

ಕುಮಾರಸ್ವಾಮಿ ಅವರು ನೀಚ ರಾಜಕಾರಣ, ನೀಚ ಎನ್ನುವ ಪದ ಬಳಕೆ ಮಾಡಿದ್ದಾರೆ ಎಂದಾಗ “ಒಳ್ಳೊಳ್ಳೆಯ ಪದಗಳನ್ನು ಬಳಸಿ ಮಾತನಾಡುತ್ತಿರುವ ಅವರಿಗೆ ಒಳ್ಳೆಯದಾಗಲಿ ಅವರ ಪದಕೋಶಗಳಲ್ಲಿ ಒಳ್ಳೊಳ್ಳೆ ಪದಗಳನ್ನು ಹುಡುಕುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

ಡಿ.ಕೆ.ಶಿವಕುಮಾರ್ ಅವರು ದಿನ 50 ಕೋಟಿ ದುಡ್ಡಿಲ್ಲದೇ ಮಲಗುತ್ತಿಲ್ಲ ಎಂದು ಕೇಳಿದಾಗ “ನಾನು ದಿನವೂ ನಿದ್ದೆ ಮಾಡುತ್ತಿಲ್ಲ. ಅವರು ನಿದ್ದೆ ಮಾಡುತ್ತಿಲ್ಲ”. ಅವರು ಏಕೆ ನಿದ್ದೆ ಮಾಡುತ್ತಿಲ್ಲ ಎಂದು ಮರು ಪ್ರಶ್ನಿಸಿದಾಗ “ನನಗೆ ಸಿಗಲಿಲ್ಲವಲ್ಲ ಎಂದು ಕೈಯನ್ನು ಹೊಸಕಿಕೊಳ್ಳುತ್ತಿದ್ದಾರೆ. ಬರೀ ಅವರೇ ಹೊಡಿತಾ ಇದ್ದಾರೆ. ನನಗೆ ಈ ಅವಕಾಶ ಸಿಗಲಿಲ್ಲವಲ್ಲ ಎಂದು ನಿದ್ದೆ ಮಾಡುತ್ತಿಲ್ಲ” ಎಂದು ಕಾಲೆಳೆದರು.

ಆಪರೇಷನ್ ಕಮಲ ಆದಾಗ ಶಿವಕುಮಾರ್ ಅವರು ಮುಂಬೈಗೆ ಬಂದಿದ್ದು ಕೇವಲ ನಾಟಕೀಯವಾದ ವರ್ತನೆ. ಒಬ್ಬ ಶಾಸಕರನ್ನು ಕರೆತರಲು ಆಗಲಿಲ್ಲ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಒಟ್ನಲ್ಲಿ ಬಂಡೆ ತರ ನಿಂತೆ ಎಂದು ಒಪ್ಪಿಕೊಂಡಿದ್ದಾರಲ್ಲ. ನಾನು ನಾಟಕನಾದ್ರೂ ಮಾಡಿದೆನಲ್ಲ. ನಾನು ಏನು ಮಾಡಿದೆ ಎಂದು ಜಿ.ಟಿ.ದೇವೇಗೌಡ, ಶಿವಲಿಂಗೇಗೌಡ, ಬಾಲಕೃಷ್ಣ ಅವರನ್ನು ಕೇಳಿದರೆ ಹೇಳುತ್ತಾರೆ” ಎಂದರು.

ಸಿಎಂ ಕುರ್ಚಿ ಗಲಾಟೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಡಿಸೆಂಬರ್ ಡೆಡ್ಲೈನ್ ಎನ್ನುವ ಬಗ್ಗೆ ಕೇಳಿದಾಗ “ಚುನಾವಣೆ ಆದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಏನಾಗುತ್ತದೆ ಎಂದು ಅವರೇ ಉತ್ತರ ಕೊಡುತ್ತಾರೆ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಅವರುಗಳು ಏನೇನು ಮಾಡಿದರು, ಏನೇನು ಮಾತನಾಡಿದರು, ಜೊತೆಯಲ್ಲಿ ಇರುವವರು ಏನೇನು ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿದೆ” ಎಂದರು.

ದೇವೇಗೌಡರು ಕನಕಪುದಲ್ಲಿ ಪ್ರಚಾರ ಮಾಡಿರುವ ಕಾರಣಕ್ಕೆ ಹೆಚ್ಚಿನ ಮತಗಳು ಬರುತ್ತವೆ ಎಂದಾಗ “ತೆಗೆದುಕೊಳ್ಳಲಿ ಸಂತೋಷ. ನಾವು ಗೆಲ್ಲಬೇಡ ಎಂದು ಹೇಳಿದ್ದೇವೆಯೇ? 28 ಸ್ಥಾನಗಳನ್ನೂ ಮೋದಿಯವರಿಗೆ ದಾರೆ ಎರೆಯಲಿ” ಎಂದರು.

ಹಿಂದೂಸ್ತಾನ್ ಸಮಾಚಾರ್


 rajesh pande