ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ - ಡಾ.ವೈ.ರಮೇಶ್ಬಾಬು
ಬಳ್ಳಾರಿ,, 20 ಏಪ್ರಿಲ್ (ಹಿ.ಸ): ಆ್ಯಂಕರ್: ಆರಂಭದ ಮಳೆಗಾಲದಲ್ಲಿ ಕಂಡುಬರಬಹುದಾದ ಗುಡುಗು-ಸಿಡಿಲು ಹಾನಿಯಿಂದ ಸಂರಕ್
   ಮಳೆಗಾಲದಲ್ಲಿ ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಿ : ಡಾ.ವೈ.ರಮೇಶ್‍ಬಾಬು


ಬಳ್ಳಾರಿ,, 20 ಏಪ್ರಿಲ್ (ಹಿ.ಸ):

ಆ್ಯಂಕರ್: ಆರಂಭದ ಮಳೆಗಾಲದಲ್ಲಿ ಕಂಡುಬರಬಹುದಾದ ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಕಂಡುಬರುವ ಮಳೆಗಾಲದ ಆರಂಭದ ಹಂತದಲ್ಲಿ ತೀವ್ರತರದ ಗುಡುಗು-ಸಿಡಿಲು ಕಂಡುಬರುವುದು ಸಾಮಾನ್ಯವಾಗಿದ್ದು, ಜೊತೆಗೆ ಬಿರುಸಾಗಿ ಗಾಳಿ ಸಹಿತ ಮಳೆ ಕಂಡುಬರುವುದು ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಬಯಲು ಪ್ರದೇಶಗಳಲ್ಲಿ, ಗಿಡಗಳ ಕೆಳಗಡೆ ಅಥವಾ ಕಬ್ಬಿಣದಿಂದ ಕೂಡಿರುವ ಕಟ್ಟಡ ಅಥವಾ ಶೆಡ್ಗಳಲ್ಲಿ ಆಶ್ರಯ ಪಡೆಯದೇ ಸೂಕ್ತ ಸ್ಥಳದಲ್ಲಿ ಇದ್ದು, ಜೀವ ಹಾನಿಯನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಅವರು ವಿನಂತಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾಲ ಕಾಲಕ್ಕೆ ನೀಡುವ ಮಾರ್ಗಸೂಚನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರೋಗ್ಯದ ದೃಷ್ಟಿಯಿಂದ ನೀಡುವ ಸಲಹೆಗಳನ್ನು ಅನುಸರಿಸಿ ವಿಪತ್ತಿನಿಂದ ಪಾರಾಗಲು ಕೈಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಕೈಗೊಳ್ಳಬೇಕಾದ ಕ್ರಮಗಳು:*

ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ, ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ತಗ್ಗು ಪ್ರದೇಶ ಇಲ್ಲದೇ ಬಯಲಿನಲ್ಲಿಯೇ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಏಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ, ಕುರಿಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ಏಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆರಿಸಿಕೊಳ್ಳುತ್ತದೆ.

ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ. ವಿದ್ಯುತ್ ಕಂಬ, ಎಲೆಕ್ಟ್ರಿಕಲ್ ಟವರ್, ಮೊಬೈಲ್ ಟವರ್ ಟ್ರಾನ್ಸ್ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬಾರದು. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸ್ ಅನ್ನು ಸ್ವಚ್ಛ ಮಾಡುವ ಸಾಹಸಬೇಡ ಎಂದು ಅವರು ತಿಳಿಸಿದ್ದಾರೆ.

ಮನೆಯ ಕಿಟಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಪೋನ್ನಲ್ಲಿ ಮಾತನಾಡಬಾರದು, ಅದನ್ನು ಚಾರ್ಚ್ ಮಾಡುವ ಸಾಹಸವೂ ಬೇಡ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ, ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೇ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು ಮತ್ತು ಕಂಪ್ಯೂಟರ್, ಲ್ಯಾಪ್ಟ್ಯಾಪ್ಗಳಿಂದ ದೂರವಿರಬೇಕು. ಮನೆಯ ಕಾಂಕ್ರೀಟ್ ಗೋಡೆಗಳನ್ನು ಸ್ಪರ್ಶಿಸದೇ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ ಇರುತ್ತದೆ.

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಿಡಿಲು ಬಾಧಿತ ವ್ಯಕ್ತಿಗಳು ಆಗಮಿಸಿದಾಗ ತಕ್ಷಣ ಚಿಕಿತ್ಸೆ ಕ್ರಮಗಳನ್ನು ಕೈಗೊಳ್ಳುವ ಕುರಿತು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಅಗತ್ಯ ಔಷಧಿಗಳನ್ನು ದಾಸ್ತಾನು ಇಟ್ಟಿಕೊಳ್ಳಲಾಗಿದೆ ಎಂದು ಡಿಹೆಚ್ಓ ಡಾವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.


 rajesh pande