ಕೋಲಾರ ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟಣೆ
ಕೋಲಾರ, ೨೮ ಮಾರ್ಚ್ (ಹಿ.ಸ) : ಆ್ಯಂಕರ್ : ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಏ.೨೬ರಂದು ನಡೆಯಲಿರುವ ಚುನಾವಣೆಗೆ ಗು
ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಗುರುವಾರ ಕೋಲಾರ ಲೋಕಸಭಾ ಚುನಾವಣೆಯ ಅಧಿಕೃತ ಅಧಿಸೂಚನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಕೋಲಾರ, ೨೮ ಮಾರ್ಚ್ (ಹಿ.ಸ) :

ಆ್ಯಂಕರ್ : ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಏ.೨೬ರಂದು ನಡೆಯಲಿರುವ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ನಾಳೆ (ಶುಕ್ರವಾರ) ಮಾ.೨೯ ರಂದು ಸಾರ್ವತ್ರಿಕ ರಜೆ ಅಂಗವಾಗಿ ಹಾಗೂ ಮಾ.೩೧ ಭಾನುವಾರ ಸರ್ಕಾರಿ ರಜೆ ದಿನವಾಗಿರುತ್ತದೆ. ನಾಮ ಪತ್ರ ಸಲ್ಲಿಕೆಗೆ ಏ.೪ರಂದು ಕೊನೆಯ ದಿನಾಂಕವಾಗಿದೆ. ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗಧಿಪಡಿಸಲಾಗಿದೆ. ಏ.೫ರಂದು ನಾಮಪತ್ರ ಪರಿಶೀಲನೆ ಬೆಳಗ್ಗೆ ೧೧ ರಿಂದ ಪ್ರಾರಂಭಿಸಲಾಗುವುದು. ಏ.೮ರ ಸಂಜೆ ೩ ಗಂಟೆಯವರೆಗೆ ನಾಮಪತ್ರ ಹಿಂಪಡೆಯಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಕಾರಿ ಅಕ್ರಂಪಾಷ ತಿಳಿಸಿದರು.

ಗುರುವಾರ ಲೋಕಸಭಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿದರು. ಚುನಾವಣಾ ಆಯೋಗ ಎರಡು ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ ನಿಗಧಿಪಡಿಸಿದೆ. ಏ.೨೬ರಂದು ಬೆಳಗ್ಗೆ ೭ ಗಂಟೆಯಿ0ದ ಸಂಜೆ ೬ ಗಂಟೆಯವರೆಗೆ ಮತಚಲಾಯಿಸಬಹುದಾಗಿದೆ. ಒಟ್ಟು ೭ ರಾಷ್ಟ್ರೀಯ ಪಕ್ಷಗಳು ಚುನಾವಣೆ ಪ್ರತಿನಿಧಿಸುತ್ತಿವೆ ಇದರೊಂದಿಗೆ ಇತರೆ ಪ್ರಾದೇಶಿಕ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಪ್ರತಿನಿಧಿಸುವರು ಎಂದು ತಿಳಿಸಿದರು.

ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವ ಉಮೇದುವಾರನಿಗೆ ಮತ ಕ್ಷೇತ್ರದ ಓರ್ವ ಮತದಾರ ಸೂಚಕನಾಗಿರಬೇಕು. ಇತರೆ ಪಕ್ಷಗಳಿಂದ ಸ್ಪರ್ಧಿಸುವ ಉಮೇದುವಾರನಿಗೆ ಕ್ಷೇತ್ರದ ೧೦ ಮಂದಿ ಮತದಾರರು ಸೂಚಕರಾಗಿದ್ದು ಎಲ್ಲಾ ಸೂಚಕರ ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಓರ್ವ ಅಭ್ಯರ್ಥಿ ೨ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಒಂದು ಕ್ಷೇತ್ರಕ್ಕೆ ಗರಿಷ್ಠ ೪ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಉಮೇದುವಾರ ಬೇರೊಂದು ಕ್ಷೇತ್ರದಿಂದ ಬಂದವನಾಗಿದ್ದರೆ ಆ ಕ್ಷೇತ್ರದ ಮತದಾರರ ಪಟ್ಟಿಯ ಪ್ರಮಾಣೀಕೃತ ಪ್ರತಿ ಸಲ್ಲಿಸಬೇಕೆಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕ್ರಮಬದ್ಧ ನಾಮಪತ್ರ ಸಲ್ಲಿಸಬೇಕು. ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯ ಸುತ್ತ ೧೦೦ ಮೀಟರ್ ವ್ಯಾಪ್ತಿಯವರೆಗೆ ೧೪೪ರ ಕಾಯ್ದೆ ಜಾರಿ ಮಾಡಿದೆ. ನಾಮಪತ್ರ ಸಲ್ಲಿಸುವ ಉಮೇದುವಾರರೊಂದಿಗೆ ೪ ಮಂದಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿಗೆ ಬರಲು ಅನುಮತಿ ನೀಡಲಾಗಿದೆ. ಒಟ್ಟು ೫ ಮಂದಿಗೆ ಮಾತ್ರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜತೆಯಲ್ಲಿರಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯೊಂದಿಗೆ ನಮೂನೆ ೨ಎ ನೀಡಬೇಕು. ಪ್ರಮಾಣ ಪತ್ರ ಅರ್ಜಿ ೨೬ ಇ-ಸ್ಟಾಂಪ್ನೊ0ದಿಗೆ ೧ ಮೂಲಪ್ರತಿ, ೨ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ಇದನ್ನು ಕಮೀಷನರ್ ಅಥವಾ ಪ್ರಥಮ ದರ್ಜೆ ನ್ಯಾಯಾಧೀಶರ ಸಮ್ಮುಖದಲ್ಲಿ ನೋಟರಿಯ ಮುಂದೆ ಪ್ರಮಾಣಿಕರಿಸಬೇಕೆಂದು ವಿವರಿಸಿದರು.

ಪ್ರಮಾಣ ಪತ್ರ-೨೬ರಲ್ಲಿ ವೈಯುಕ್ತಿಕವಾದ ಸ್ಥಿರಾಸ್ತಿ, ಚರಾಸ್ತಿಗಳ ವಿವರಗಳನ್ನು ಸಲ್ಲಿಸಬೇಕು. ಪ್ರತಿಯೊಂದ ಕಾಲಂಗಳನ್ನು ಕ್ರಮಬದ್ಧವಾಗಿ ಭರ್ತಿ ಮಾಡಿರಬೇಕು. ಅನ್ವಯಸದಿದ್ದಲ್ಲಿ ಅನ್ವಯಿಸ ತಕ್ಕದಲ್ಲ, ಯಾವುದು ಇಲ್ಲ, ಗೊತ್ತಿಲ್ಲ ಎಂದು ಕಡ್ಡಾಯವಾಗಿ ದಾಖಲಿಸಬೇಕು ಮತ್ತು ಪ್ರಮಾಣಿಕರಿಸಬೇಕು. ಪ್ರಮಾಣಪತ್ರ ಅಪೂರ್ಣವಾಗಿ ಭರ್ತಿ ಮಾಡಿದಲ್ಲಿ ಅಥವಾ ಕಾಲಂಗಳು ಖಾಲಿ ಬಿಟ್ಟಲ್ಲಿ ನಾಮನಿರ್ದೇಶನ ತಿರಸ್ಕರಿಸಲಾಗುವುದು. ಪ್ರಮಾಣ ಪತ್ರದ ಎಲ್ಲಾ ಪುಟಗಳಿಗೂ ಉಮೇದುವಾರನ ಸಹಿ ಹಾಗೂ ನೋಟರಿ ಸಹಿ ಇರಬೇಕು ಎಂದು ತಿಳಿಸಿದರು.

ಉಮೇದುವಾರ ತನ್ನ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ನಮೂನೆ ಸಿ-೧ ರಲ್ಲಿ ಕನಿಷ್ಟ ಮೂರು ಪ್ರತ್ಯೇಕ ದಿನಾಂಕಗಳ0ದು ದಿನ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಸಾರ್ವಜನಿಕರಿಗೆ ಮಾಹಿತಿ ನೀಡಲು ಏ.೮ರಿಂದ ೨೪ರವರೆಗೆ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂರು ಪ್ರತ್ಯೇಕ ದಿನಾಂಕದ0ದು ಪ್ರಚಾರ ಪಡಿಸಿರಬೇಕೆಂದು ಹೇಳಿದರು.

ಸರ್ಕಾರಿ ವಸತಿಗೆ ಸಂಬ0ಧಿಸಿದ0ತೆ ಬಾಡಿಗೆ, ವಿದ್ಯುತ್ ಶುಲ್ಕ, ನೀರಿನ ಶುಲ್ಕ ದೂರವಾಣಿ ಶುಲ್ಕ ಮತ್ತು ಇತ್ಯಾದಿ ಸರ್ಕಾರಕ್ಕೆ ಬಾಕಿ ಇದ್ದಲ್ಲಿ ಅದನ್ನು ಪಾವತಿಸಿ ಪ್ರಮಾಣಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸತಕ್ಕದ್ದು. ನಾಮಪತ್ರವನ್ನು ಆನ್ಲೈನ್ ಮೂಲಕ ಸಲ್ಲಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. (ಸುವಿಧ ಪೋರ್ಟಲ್) ನಮೂನೆ ೨೬ರಲ್ಲಿ ಪ್ರಮಾಣ ಪತ್ರಗಳು ಸಹ ಆನ್ಲೈನ್ ಮೂಲಕ ಸುವಿಧ ತಂತ್ರಾ0ಶದಲ್ಲಿ ನಮೂದಿಸಬಹುದಾಗಿದೆ. ಠೇವಣಿಯನ್ನು ಸಹ ಪೋರ್ಟಲ್ನಲ್ಲಿ ಪಾವತಿಸಬಹುದಾಗಿದೆ ಎಂದು ತಿಳಿಸಿದರು.

ನಾಮಪತ್ರ ಹಾಗೂ ನಮೂನೆ-೨೬ನ್ನು ಕ್ಯೂಆರ್ ಕೋಡ್ ನೊಂದಿಗೆ ಮುದ್ರಿತ ಪ್ರತಿ ಪಡೆದು ಸಹಿ ಮಾಡಿ ಎಲ್ಲಾ ದಾಖಲೆಗಳೊಂದಿಗೆ ಕಡ್ಡಾಯವಾಗಿ ಚುನಾವಣಾಧಿಕಾರಿಗೆ ನಿಗಧಿತ ಅವಧಿಯೊಳಗೆ ಸಲ್ಲಿಸಬೇಕು. ಮುದ್ರಿತ ಪ್ರತಿ ಚುನಾವಣಾಧಿಕಾರಿಗೆ ಸಲ್ಲಿಸದಿದ್ದಲ್ಲಿ ಅಂತಹ ನಾಮಪತ್ರಗಳನ್ನು ಪರಿಗಣಿಸುವುದಿಲ್ಲ. ನಾಮಪತ್ರ ಮತ್ತು ನಮೂನೆ-೨೬ನ್ನು ಸುವಿಧ ತಂತ್ರಾ0ಶದಲ್ಲಿ ಏ.೩ರೊಳಗೆ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ನಾಮಪತ್ರಗಳ ಪರಿಶೀಲನೆ ನಂತರ ಏಪ್ರಿಲ್ ೮ರ ಸಂಜೆ ೩ರೊಳಗೆ ನಾಮಪತ್ರ ವಾಪಸ್ಸಾತಿ ಕಾಲಾವಕಾಶ ಮುಗಿದ ನಂತರ ಅಂತಮವಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು. ಏ.೨೬ ಚುನಾವಣೆಯ ಮುಗಿದ ನಂತರ ಜೂ.೪ ರಂದು ಮತ ಎಣಿಕೆ ನಡೆಯಲಿದೆ. ಜೂ.೬ರಂದು ಚುನಾವಣೆ ಪ್ರಕ್ರಿಯೆಗಳು ಸಂಪೂರ್ಣಗೊಳ್ಳಲಿದ್ದು ಎರಡನೇ ಹಂತದ ಚುನಾವಣೆ ಮುಂದುವರೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಾಳ್, ಚುನಾವಣಾ ವೆಚ್ಚಗಳ ವೀಕ್ಷಕ ಬಂಡಾರು ಬಾಲು ಮಹೇಂದ್ರ, ಚುನಾವಣಾ ಸಹಾಯಕಾಧಿಕಾರಿಗಳಾದ ನಾಗವೇಣಿ, ಸೇರಿದಂತೆ ಮತ್ತಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಗುರುವಾರ ಕೋಲಾರ ಲೋಕಸಭಾ ಚುನಾವಣೆಯ ಅಧಿಕೃತ ಅಧಿಸೂಚನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


 rajesh pande