ಬೆಂಗಳೂರು, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಎಸ್.ಎಂ ಕೃಷ್ಣ ಅವರೊಬ್ಬ ದೂರದೃಷ್ಟಿವುಳ್ಳ ಮುತ್ಸದ್ದಿ ರಾಜಕಾರಣಿ. ಕರ್ನಾಟಕ ಮತ್ತು ದೇಶದ ರಾಜಕಾರಣದಲ್ಲಿ ದೀರ್ಘ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ವಿದೇಶಾoಗ ಸಚಿವರಾಗಿದ್ದ ಎಸ್.ಎಂ ಕೃಷ್ಣ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದ ಅವರು, ಸಮರ್ಥ ಆಡಳಿಗಾರರು. ವಿಧಾನ ಸಭೆ, ವಿಧಾನ ಪರಿಷತ್ತು, ಲೋಕ ಸಭೆ ರಾಜ್ಯ ಸಭೆಗಳಲ್ಲಿ ಸದಸ್ಯರಾಗಿದ್ದ ಕೆಲವೇ ರಾಜಕಾರಣಿಗಳಲ್ಲಿ ಇವರೂ ಒಬ್ಬರು. ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ವಿಧಾನ ಸಭೆಯ ಅಧ್ಯಕ್ಷರೂ ಆಗಿದ್ದರು. ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಬೆಂಗಳೂರನ್ನು ಸಿಂಗಾಪುರ ಮಾಡಬೇಕೆಂಬ ಕನಸು ಕಂಡಿದ್ದರು. ಅವರ ಕನಸು ನನಸಾಗಲಿಲ್ಲ. ನಾಲ್ಕೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಐ. ಟಿ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ ಅದಕ್ಕೆ ಎಸ್.ಎಂ.ಕೃಷ್ಣ ಅವರು ಕಾರಣ. ಬೆಂಗಳೂರು ನಗರ ಭಾರತದ ಸಿಲಿಕಾನ್ ವ್ಯಾಲಿ ಆಗಬೇಕಾದರೆ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿತು. ಬರಗಾಲವಿತ್ತು, ಡಾ: ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಪ್ರಕರಣ ಹಾಗೂ ಕಾವೇರಿ ವಿವಾದಗಳಲ್ಲಿ ಜಾಣ್ಮೆಯಿಂದ ವ್ಯವಹರಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.ಆ ಸಂದರ್ಭದಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ತಿಳಿಸಲೆಂದು ಮಹಾರಾಷ್ಟ್ರಕ್ಕೆ ಹೋಗಿ ಭೇಟಿಯಾದಾಗ ನೀವು ಕಾಂಗ್ರೆಸ್ ಸೇರುವುದು 'ಐತಿಹಾಸಿಕ ಅಗತ್ಯ' ಎಂದಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.
ಕೃಷ್ಣ ಅವರು ಸೌಮ್ಯ ಸ್ವಭಾವದ ಸಜ್ಜನ ರಾಜಕಾರಣಿ. ಎಂದಿಗೂ ಸೇಡಿನ, ದ್ವೇಷದ ರಾಜಕಾರಣ ಮಾಡಿರಲಿಲ್ಲ. ದೀರ್ಘ ಕಾಲ ಕರ್ನಾಟಕದ, ದೇಶದ ಜನರ ಸೇವೆಯನ್ನು ಮಾಡಿದ್ದಾರೆ. ಅವರ ಸಾವಿನಿಂದ ಒಬ್ಬ ಉತ್ತಮ ವಾಗ್ಮಿ, ಹಾಗೂ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ. ರಾಜಕೀಯವಾಗಿ ದೊಡ್ಡ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಆಶಿಸುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa