ಹಾವೇರಿ, 07 ನವೆಂಬರ್ (ಹಿ.ಸ.) :
ಆ್ಯಂಕರ್ : 17 ವರ್ಷಗಳ ಕಾಲ ಶಿಗ್ಗಾಂವಿಯನ್ನು ಪ್ರತಿನಿಧಿಸಿ, ರಾಜ್ಯದ ಮುಖ್ಯಮಂತ್ರಿಯಾದರೂ ಯಾವುದೇ ಸಾಕ್ಷಿಗುಡ್ಡೆಗಳನ್ನು ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಜನತೆಗೆ ನೀಡಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳಂತೆ ಒಂದೇ ಒಂದು ಗುರುತರವಾದ ಯೋಜನೆಗಳನ್ನು ಅವರು ಜಾರಿಗೊಳಿಸಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಶಿಗ್ಗಾಂವಿ ಉಪಚುನಾವಣೆ ಅಂಗವಾಗಿ ಕ್ಷೇತ್ರದ ದುಂಡಸಿಯಲ್ಲಿ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬೊಮ್ಮಾಯಿ ಅವರ ನಡೆಯ ಬಗ್ಗೆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ. ಬಸವರಾಜ ಬೊಮ್ಮಾಯಿ ಅವರೇ ನೀವು ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದಿರಿ, ಜೊತೆಗೆ ಕೇಂದ್ರದಲ್ಲಿಯೂ ನಿಮ್ಮ ಸರ್ಕಾರ ಅಧಿಕಾರದಲ್ಲಿತ್ತು. ಅಧಿಕಾರ ಇದ್ದರೂ ನಿಮ್ಮ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಏನು? ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದೀರಿ?” ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಅವರು ಮಹದಾಯಿ ಯೋಜನೆಗೆ ಅನುಮತಿ ಸಿಕ್ಕೇಬಿಟ್ಟಿತು ಎಂದು ಪಟಾಕಿ ಹೊಡೆದು ಸಂಭ್ರಮಿಸಿದರು. ಆದರೆ ಇದಕ್ಕೆ ಕೇಂದ್ರ ಪರಿಸರ ಇಲಾಖೆಯವರು ಇನ್ನೂ ಅನುಮತಿ ಕೊಟ್ಟಿಲ್ಲ. ಬಿಜೆಪಿಯಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದರು.
ಇದುವರೆಗೂ ಸಾಮಾನ್ಯ ಜನರ ಬದುಕಿಗೆ ಯಾವ ಸಹಾಯವನ್ನೂ ಬಿಜೆಪಿ ಮಾಡಿಲ್ಲ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa