ಕೋಲಾರ, 0೫ ನವೆಂಬರ್ (ಹಿ.ಸ) :
ಆ್ಯಂಕರ್ : ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನ.೮ ರಿಂದ ೧೦ ರವರೆಗೂ ಮೂರು ದಿನಗಳ ಕಾಲ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ೪ ಸಾವಿರ ಮಂದಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿರಲಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಎಚ್ಚರವಹಿಸಿ ಎಂದು ಕ್ರೀಡಾಕೂಟದ ಹಿನ್ನಲೆಯಲ್ಲಿ ನೇಮಕಗೊಂಡ ವಿವಿಧ ಸಮಿತಿಗಳ ಸದಸ್ಯರಿಗೆ ಡಿಡಿಪಿಐ ಕೃಷ್ಣಮೂರ್ತಿ ಸೂಚನೆ ನೀಡಿದರು.
ನಗರದ ಗುರುಭವನದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದ ಹಿನ್ನಲೆಯಲ್ಲಿ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯಮಟ್ಟದ ಕ್ರೀಡಾಕೂಟವನ್ನು ಜಿಲ್ಲೆಯಲ್ಲಿ ನಡೆಸಲು ಅವಕಾಶ ಸಿಕ್ಕಿದೆ, ಈಗಾಗಲೇ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು, ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಎಂದು ನಿರ್ದೇಶನ ನೀಡಿದ್ದು, ಅವರ ಸೂಚನೆಯಂತೆ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅದಕ್ಕೆ ನೋಡಲ್ ಅಧಿಕಾರಿಗಳ ನೇಮಕವನ್ನು ಮಾಡಲಾಗಿದೆ. ಸಮಿತಿ ಸದಸ್ಯರು ಹಾಗೂ ಮುಖ್ಯಸ್ಥರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಬದ್ದತೆಯಿಂದ ನಿರ್ವಹಿಸಬೇಕು, ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮವಹಿಸಬೇಕು ಎಂದರು.
ಪ್ರಮುಖವಾಗಿ ಸ್ವಾಗತ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಆಹಾರ ಸಮಿತಿ, ಬಹುಮಾನ ವಿತರಣೆ ಸಮಿತಿ. ಸಾಂಸ್ಕೃತಿಕ ಸಮಿತಿ, ಪ್ರಚಾರ ಸಮಿತಿ ಮತ್ತಿತರ ಸಮಿತಿಗಳನ್ನು ರಚಿಸಲಾಗಿದ್ದು, ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ೩೫ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ನಗರದ ಎಲ್ಲಾ ಪ್ರಮುಖ ಶಾಲೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದ ಅವರು, ಸೂಚಿಸಿರುವ ಜಿಲ್ಲೆಯ ವಿದ್ಯಾರ್ಥಿಗಳನ್ನು ಆಯಾ ಶಾಲೆಗಳಿಗೆ ತಲುಪಿಸಿ, ಅಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವಲ್ಲಿ ಅಲ್ಲಿನ ಮುಖ್ಯಸ್ಥರು ಗಮನಹರಿಸಬೇಕು ಎಂದು ತಿಳಿಸಿದರು.
ಮೂರು ದಿನಗಳ ಕಾಲವೂ ವಸತಿ ವ್ಯವಸ್ಥೆ ಇರುವ ಶಾಲೆಗಳಿಂದ ಮಕ್ಕಳನ್ನು ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಕರೆತರಲು ಮತ್ತು ನಂತರ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಲಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಅತಿ ಮುಖ್ಯವಾಗಿದ್ದು, ಹೆಚ್ಚಿನ ನಿಗಾ ವಹಿಸಲು ಸೂಚಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಕೂಟಕ್ಕೆ ಆಗಮಿಸುವ ಸುಮಾರು ೩೫೦೦ ಮಕ್ಕಳು ಹಾಗೂ ೫೦೦ ಮಂದಿ ಶಿಕ್ಷಕರಿಗೆ ಊಟದ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹತ್ತಿರವಾಗಿರುವ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯವಸ್ಥೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.
ಕೋಲಾರ ಜಿಲ್ಲೆ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಗೌರವಕ್ಕೆ ಹಿಂದೆ ಪಾತ್ರವಾಗಿದೆ, ಇದೀಗ ರಾಜ್ಯಮಟ್ಟದ ಕ್ರೀಡಾಕೂಟವನ್ನು ಸಹಾ ಅಷ್ಟೇ ಜವಾಬ್ದಾರಿಯಿಂದ ಹಾಗೂ ಯಶಸ್ವಿಯಾಗಿ ನಡೆಸಲು ಎಲ್ಲಾ ಮುಖ್ಯಶಿಕ್ಷಕರು,ಶಿಕ್ಷಕರು, ಖಾಸಗಿ ಶಾಲೆಗಳ ಮುಖ್ಯಸ್ಥರು, ವಿವಿಧ ಸಮಿತಿಗಳ ಜವಾಬ್ದಾರಿ ವಹಿಸಿಕೊಂಡ ನೋಡಲ್ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ವೀಣಾ,ಸಗೀರಾ ಅಂಜು0, ಬಿಸಿಯೂಟ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ವಿಷಯ ಪರಿವಿಕ್ಷಕ ಸಮೀಉಲ್ಲಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ್, ತಾಲ್ಲೂಕು ಅಧಿಕಾರಿ ಚೌಡಪ್ಪ, ಖಾಸಗಿ ಶಾಲೆಗಳ ಪಾಲ್ಗುಣ, ಕ್ಷೇತ್ರ ಸಮನ್ವಯಾಧಿಕಾರಿ ಶಶಿವಧನ, ಮುಖ್ಯಶಿಕ್ಷಕರಾದ ಪಿ.ವಿ.ಗಾಯತ್ರಿ, ರಾಧಮ್ಮ,ರಮೇಶ್‌ಗೌಡ, ವಿಜಯಾನಂದ್, ವೇಣುಗೋಪಾಲ್ ಸೇರಿದಂತೆ ಎಲ್ಲಾ ಮುಖ್ಯಶಿಕ್ಷಕರು ಜಿಲ್ಲೆಯ ಎಲ್ಲಾ ಬಿಆರ್‌ಸಿಗಳು, ಅಕ್ಷರದಾಸೋಹ ಸಹಾಯಕ ನಿರ್ದೇಶಕರು,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಸಂಯೋಜಕರು,ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಎಲ್ಲಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ವಸತಿಗಾಗಿ ಆಯ್ಕೆ ಮಾಡಿಕೊಂಡಿರುವ ಶಾಲೆಗಳ ಮುಖ್ಯಸ್ಥರು ಹಾಜರಿದ್ದರು.
ಚಿತ್ರ ; ಕೋಲಾರದ ಗುರುಭವನದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದ ಹಿನ್ನಲೆಯಲ್ಲಿ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್