ದೀಪಾವಳಿ ಹಬ್ಬದ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳು
ದೀಪಾವಳಿ ಹಬ್ಬದ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳು
ದೀಪಾವಳಿ ಹಬ್ಬದ ಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳು


ಲೇಖಕರು: ಡಾ. ಶಿವಮೂರ್ತಿ ಎನ್, ಪ್ರಾಧ್ಯಾಪಕರು, ಔಷಧ ಶಾಸ್ತ್ರ ವಿಭಾಗ, ಸಿಡಿಸೈಮರ್ ವೈದ್ಯಕೀಯ ಮಹಾವಿದ್ಯಾಲಯ, ರಾಮನಗರ ಜಿಲ್ಲೆ, ಕರ್ನಾಟಕ

ಪೀಠಿಕೆ:

ದೀಪಾವಳಿ ಹಬ್ಬದ ಸಮಯ ಬರುತ್ತಿದ್ದಂತೆ, ಹರ್ಷ ಮತ್ತು ಹಬ್ಬದ ಸಂಭ್ರಮ ಎಲ್ಲೆಡೆಯೂ ತುಂಬಿರುತ್ತದೆ. ಹೊಸ ಬಟ್ಟೆ, ಬಣ್ಣಬಣ್ಣದ ದೀಪಗಳು, ರುಚಿಕರವಾದ ಸಿಹಿ ತಿಂಡಿಗಳು ಮತ್ತು ಕುಟುಂಬದ ಸಂಭ್ರಮವನ್ನು ಎಲ್ಲರೂ ನಿರೀಕ್ಷಿಸುತ್ತಿರುತ್ತಾರೆ.

ರಾಘು, ಒಬ್ಬ ಐಟಿ ಕಂಪನಿಯ ಉದ್ಯೋಗಿ, ಆತ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು, ಸಿಹಿತಿಂಡಿಗಳನ್ನು ಸವಿಯಲು, ಮತ್ತು ಮಕ್ಕಳ ಜೊತೆಗೆ ಪಟಾಕಿಗಳನ್ನು ಹಚ್ಚಲು ಬಹಳ ಕಾತರದಿಂದ ಎದುರುನೋಡುತ್ತಿದ್ದಾನೆ. ಆದಾಗ್ಯೂ, ರಾಘು ತಾನು ಕಳೆದ ವರ್ಷ ಅನುಭವಿಸಿದ ಉಸಿರಾಟದ ಸಮಸ್ಯೆ, ವಯಸ್ಸಾಗಿರುವ ಪೋಷಕರಿಗೆ ಹೊಗೆಯಿಂದ ಆಗುವ ಉಸಿರಾಟದ ತೊಂದರೆ, ಮತ್ತು ಹಬ್ಬದ ನಂತರ ಕಾಡುವ ದೇಹದ ತೂಕ ಹೆಚ್ಚಳದ ಸಮಸ್ಯೆಗಳನ್ನು ನೆನಪಿಸಿಕೊಳ್ಳುತ್ತಾನೆ. ಈ ಬಾರಿ ಆರೋಗ್ಯಕರ ದೀಪಾವಳಿ ಆಚರಿಸಲು ನಿರ್ಧರಿಸಿದ ರಾಘು, ಆರೋಗ್ಯ ತಜ್ಞರ ಜೊತೆ ಸಲಹೆ ಪಡೆಯಲು ತೀರ್ಮಾನಿಸುತ್ತಾನೆ.

ತಜ್ಞರ ಜೊತೆ ಪ್ರಶ್ನೋತ್ತರಗಳ ಮೂಲಕ, ದೀಪಾವಳಿಯಲ್ಲಿ ಸಾಮಾನ್ಯವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ರಾಘು ಮಾಹಿತಿ ಪಡೆಯುತ್ತಾನೆ. ಈ ಕೆಳಗೆ ಹಬ್ಬವನ್ನು ಆರೋಗ್ಯಕರವಾಗಿ ಆಚರಿಸಲು ಬೇಕಾದ ಕೆಲವು ಸಲಹೆಗಳನ್ನು ಕೊಟ್ಟಿದ್ದೇವೆ.

ಪ್ರ. 1: ದೀಪಾವಳಿಯ ಸಮಯದಲ್ಲಿ ಸಾಮಾನ್ಯವಾಗಿ ಯಾವ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ?

ಉ: ದೀಪಾವಳಿಯ ಸಮಯದಲ್ಲಿ ಉಸಿರಾಟ ಸಮಸ್ಯೆ, ಚರ್ಮದ ಅಲರ್ಜಿ, ಅಜೀರ್ಣಾದಂತ ತೊಂದರೆಗಳು, ತೂಕ ಹೆಚ್ಚಳ, ಕಿವಿಯ ಸಮಸ್ಯೆಗಳು ಮತ್ತು ಕಣ್ಣಿನಲ್ಲಿ ತುರಿಕೆಯಂತಹ ಸಮಸ್ಯೆಗಳನ್ನು ತರಬಹುದು. ಪಟಾಕಿಗಳು ವಿಷಕಾರಿ ಹೊಗೆಯನ್ನು ಬಿಡುಗಡೆ ಮಾಡುತ್ತದೆ, ಸಿಹಿ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳು ಅಜೀರ್ಣ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ, ಮತ್ತು ಶಬ್ದಮಟ್ಟದ ಹೆಚ್ಚಳವು ಕಿವಿಗೆ ಹಾನಿ ಉಂಟು ಮಾಡಬಹುದು. ಉಸಿರಾಟದ ಸಮಸ್ಯೆ ಹೊಂದಿರುವ ವ್ಯಕ್ತಿಗಳು, ಮಕ್ಕಳು ಮತ್ತು ವಯಸ್ಸಾದವರಿಗೆ ಸಮಸ್ಯೆ ಹೆಚ್ಚಾಗುವ ಸಂಧರ್ಭಗಳಿರುತ್ತವೆ.

ಪ್ರ. 2: ಪಟಾಕಿ ಹೊಗೆಯಿಂದ ಉಂಟಾಗುವ ಉಸಿರಾಟದ ಸಮಸ್ಯೆಗಳನ್ನು ಹೇಗೆ ತಡೆಗಟ್ಟಬಹುದು?

ಉ: ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡಲು, ಪಟಾಕಿ ಹೊಗೆಯು ಹೆಚ್ಚು ಇರುವ ಸಮಯದಲ್ಲಿ ಹೊರಗಡೆ ಹೋಗದೆ ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಿ, ವಿಶೇಷವಾಗಿ ಆಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆ ಹೊಂದಿದವರಾಗಿದ್ದರೆ. ಮನೆಯೊಳಗಿನ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಗಾಳಿ ಸ್ವಚ್ಛ ಮಾಡುವ ಯಂತ್ರವನ್ನು (ಏರ್ ಪ್ಯೂರಿಫೈಯರ್) ಬಳಸಿ. ಹೊರಗಡೆ ಹೋಗಬೇಕಾದರೆ, ಎನ್95 ಮಾಸ್ಕ್ ಧರಿಸುವುದರಿಂದ ಹಾನಿಕಾರಕ ಕಣಗಳ ಉಸಿರಾಟದಿಂದಾಗುವ ಸಮಸ್ಯೆಗಳನ್ನು ತಡೆಗಟ್ಟಬಹುದು.

ಪ್ರ. 3: ದೀಪಾವಳಿಯಲ್ಲಿ ಯಾವ ಆಹಾರಗಳನ್ನು ದೂರವಿಡಬೇಕು?

ಉ: ಸಕ್ಕರೆ ಹೆಚ್ಚಿರುವ ಸಿಹಿತಿಂಡಿಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು, ಮತ್ತು ಹೆಚ್ಚಿನ ತೈಲವುಳ್ಳ ತಿಂಡಿಗಳನ್ನು ದೂರ ಇಡಬೇಕಾಗುತ್ತದೆ, ಏಕೆಂದರೆ ಅವು ಅಜೀರ್ಣ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಈ ತಿಂಡಿಗಳನ್ನು ಸಂಪೂರ್ಣವಾಗಿ ವರ್ಜಿಸುವುದು ಕಷ್ಟವಾದರೂ, ಸೇವಿಸುವ ಪ್ರಮಾಣವನ್ನು ನಿಯಂತ್ರಿಸುವುದು ಮುಖ್ಯ. ಕೃತಕ ಬಣ್ಣಗಳು ಮತ್ತು ಇತರೆ ವಸ್ತುಗಳಿಂದ ತಯಾರಾದ ಪ್ರಾಚ್ಯ ದೇಶದಲ್ಲಿ ತಯಾರಾದ ಸಿಹಿತಿಂಡಿಗಳನ್ನು ದೂರವಿಡಿ, ಏಕೆಂದರೆ ಅವು ಜೀರ್ಣದಂತಹ ಹೆಚ್ಚು ತೊಂದರೆಗಳನ್ನು ಉಂಟು ಮಾಡುತ್ತವೆ.

ಪ್ರ. 4: ಹಬ್ಬದ ಸಮಯದಲ್ಲಿ ತೂಕ ಹೆಚ್ಚಳವನ್ನು ಹೇಗೆ ತಡೆಯಬಹುದು?

ಉ: ತಿಂಡಿಗಳನ್ನು ಮಿತವಾಗಿ ಆಸ್ವಾದಿಸುವ ಮೂಲಕ ಆರೋಗ್ಯಕರ ಆಯ್ಕೆಗಳಾದ ಹಣ್ಣುಗಳು ಮತ್ತು ತರಕಾರಿ ಸಲಾಡ್ಗಳನ್ನು ತಿನ್ನಿ. ನಡೆಯುವದು ಅಥವಾ ತೀವ್ರವಾದ ವ್ಯಾಯಾಮದ ಮೂಲಕ ಆರೋಗ್ಯವನ್ನು ಕಾಪಾಡಬಹುದು. ಉಪವಾಸ ಮಾಡುವುದು ಬೇಡ, ಇದು ಉಪವಾಸದ ಹೆಚ್ಚು ತಿನ್ನುವ ಪ್ರವೃತ್ತಿಗೆ ಕಾರಣವಾಗಬಹುದು.

ಪ್ರ. 5: ದೀಪಾವಳಿ ಸಂಭ್ರಮದಲ್ಲಿ ಹೆಚ್ಚು ತಿನ್ನುವುದನ್ನು ತಡೆಯಲು ಯಾವ ಸಲಹೆಗಳನ್ನು ಅನುಸರಿಸಬಹುದು?

ಉ: ಹೆಚ್ಚಿನ ಕ್ಯಾಲೋರಿ ಇರುವ ಆಹಾರವನ್ನು ಚಿಕ್ಕ ಚಿಕ್ಕ ತುಂಡು ಮಾಡಿ ತಿನ್ನಲು ಪ್ರಾರಂಭಿಸಿ, ಇದು ಆಹಾರ ಸೇವನೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಗಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಹಸಿವನ್ನು ನಿಯಂತ್ರಿಸಬಹುದು. ಹಬ್ಬದ ಸಮಯದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ, ಇದರಿಂದ ಸಿಹಿತಿಂಡಿಗಳ ಮೇಲೆ ನಿಯಂತ್ರಣ ಪಡೆಯಬಹುದು.

ಪ್ರ. 6: ಪಟಾಕಿಗಳು ಕಿವಿಗೆ ಹಾನಿ ಮಾಡುತ್ತವೆಯೇ?

ಉ: ಹೌದು, ಪಟಾಕಿಗಳ ಶಬ್ದದಿಂದ ಕಿವಿಗೆ ಹಾನಿ ಉಂಟಾಗಬಹುದು, ವಿಶೇಷವಾಗಿ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ. ಶಬ್ದ ಹೆಚ್ಚು ಇರುವ ಪ್ರದೇಶಗಳಲ್ಲಿ ಕಿವಿ ಮುಚ್ಚಲು ಕಿವಿಗುಟ್ಕೆಗಳನ್ನು (ಇಯರ್ಪ್ಲಗ್ಗಳನ್ನು) ಬಳಸುವುದು ಸೂಕ್ತ. ಮಕ್ಕಳಿಗೆ ಪಟಾಕಿ ಹಚ್ಚುವಾಗ ತೀರ ಹತ್ತಿರದಿಂದ ಹಚ್ಚದಂತೆ ತಿಳಿಸುವುದು ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯ.

ಪ್ರ. 7: ಪಟಾಕಿಗಳಿಂದಾಗುವ ಕಣ್ಣಿನ ಹಾನಿಯನ್ನು ತಡೆಗಟ್ಟಲು ಏನು ಮಾಡಬಹುದು?

ಉ: ಪಟಾಕಿಗಳ ಕಣಗಳು ಮತ್ತು ಹೊಗೆ ಕಣ್ಣಿಗೆ ಕಿರಿಕಿರಿ ತರುತ್ತದೆ ಮತ್ತು ಗಾಯಗಳಿಗೆ ಕಾರಣವಾಗಬಹುದು. ಪಟಾಕಿಗಳನ್ನು ಬಳಸುವಾಗ ರಕ್ಷಕ ಕನ್ನಡಕಗಳನ್ನು (protective eyewear) ಧರಿಸುವುದು ಕಣ್ಣುಗಳಿಗೆ ಹಾನಿ ಆಗುವ ಅಪಾಯವನ್ನು ತಡೆಯುತ್ತವೆ. ಪಟಾಕಿಗಳ ಹೊಗೆ ಸ್ಪರ್ಶಿಸಿದಾಗ ಅಥವಾ ಕಿರಿಕಿರಿ ಉಂಟಾದರೆ, ಕಣ್ಣುಗಳನ್ನು ಉಜ್ಜದೆ ತಕ್ಷಣ ತಾಜಾ ನೀರಿನಿಂದ ಕಣ್ಣನ್ನು ತೊಳೆಯಬೇಕು.

ಪ್ರ. 8: ದೀಪಾವಳಿಯಲ್ಲಿ ಚರ್ಮದ ಅಲರ್ಜಿ ಮತ್ತು ಸುಟ್ಟ ಗಾಯಗಳನ್ನು ತಡೆಯಲು ಏನು ಮಾಡಬಹುದು?

ಉ: ಹತ್ತಿಯ ನೂಲಿನ ಬಟ್ಟೆಗಳನ್ನು ಧರಿಸುವುದರಿಂದ ಚರ್ಮವನ್ನು ಸುಟ್ಟ ಗಾಯಗಳಿಂದ ರಕ್ಷಿಸಲು ಸಹಾಯ ಆಗುತ್ತದೆ ಮತ್ತು ಅಲರ್ಜಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಸಿಂಥೆಟಿಕ್ ಬಟ್ಟೆಗಳನ್ನು ದೂರವಿಡಿ, ಏಕೆಂದರೆ ಅವು ತ್ವರಿತವಾಗಿ ಬೆಂಕಿಗೆ ಹಚ್ಚಿಕೊಳ್ಳಬಹುದು. ಚರ್ಮದಲ್ಲಿ ಸುಟ್ಟ ಗಾಯ ಅಥವಾ ತೊಂದರೆ ಉಂಟಾದಲ್ಲಿ, ತಕ್ಷಣ ನೀರಿನಿಂದ ತೊಳೆಯಿರಿ ಮತ್ತು ತಂಪಾದ ಕ್ರೀಮ್ ಅಥವಾ ಲೋಶನ್ ಅನ್ನು ಹಚ್ಚಿ ಚರ್ಮದ ತಣ್ಣಗಾಗಲು ಸಹಾಯ ಮಾಡಬಹುದು. ತ್ವರಿತವಾಗಿ ವೈದ್ಯರ ಸಲಹೆ ಪಡೆಯಿರಿ.

ಪ್ರ. 9: ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಏನು ತೊಂದರೆ ಉಂಟಾಗಬಹುದು?

ಉ: ದೀಪಾವಳಿಯಲ್ಲಿ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದು ರಕ್ತದ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಡಯಾಬಿಟಿಸ್ ಹೊಂದಿರುವವರಲ್ಲಿ. ಇದು ದಣಿವು, ತಲೆನೋವು ಮತ್ತು ಮನೋಸ್ಥಿತಿಯಲ್ಲಿ ಬದಲಾವಣೆಗಳನ್ನು ತರಬಹುದು. ಹೆಚ್ಚು ಸಕ್ಕರೆ ಸೇವನೆಯಿಂದ ತೂಕ ಹೆಚ್ಚಳ, ದಂತಕ್ಷಯ, ಮತ್ತು ಇತರೆ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು.

ಪ್ರ. 10: ಡಯಾಬಿಟಿಸ್ ಇರುವವರು ದೀಪಾವಳಿಯ ಸಮಯದಲ್ಲಿ ಸುರಕ್ಷಿತವಾಗಿ ಸಿಹಿತಿಂಡಿಗಳನ್ನು ಹೇಗೆ ಸವಿಯಬಹುದು?

ಉ: ಡಯಾಬಿಟಿಸ್ ಹೊಂದಿರುವವರು ಕಡಿಮೆ ಸಕ್ಕರೆಯಿರುವ ಅಥವಾ ಸಕ್ಕರೆರಹಿತ ಸಿಹಿತಿಂಡಿಗಳನ್ನು ಆಯ್ಕೆ ಮಾಡಬಹುದು, ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿಡಲು ಕ್ರಮ ಕೈಗೊಳ್ಳಬಹುದು. ಸಿಹಿತಿಂಡಿಯ ಜೊತೆಗೆ ಹೆಚ್ಚಿನ ನಾರಿನ ಅಂಶ ಇರುವ ಆಹಾರವನ್ನು ಸೇವಿಸುವುದರಿಂದ ಸಕ್ಕರೆಯು ರಕ್ತದಲ್ಲಿ ಒಮ್ಮೆಲೇ ಏರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಕೃತಕ ಸಿಹಿಕಾರಕಗಳನ್ನು ಬಳಸಿ ತಯಾರಿಸಿದ ಸಿಹಿತಿಂಡಿಗಳನ್ನು ಆಯ್ಕೆ ಮಾಡುವುದರಿಂದ ಹೆಚ್ಚಿನ ಕ್ಯಾಲೊರಿ ದೇಹ ಸೇರಿದಂತೆ ತಡೆಯಬಹುದು.

ಪ್ರ. 11: ದೀಪಾವಳಿಯ ಸಮಯದಲ್ಲಿ ಆಸ್ತಮಾ ಅಥವಾ ಇತರೆ ಧೀರ್ಘಕಾಲದ ಶ್ವಾಸಕೋಶದ ತೊಂದರೆ (COPD) ಇರುವವರಿಗೆ ಯಾವ ಮುನ್ನೆಚ್ಚರಿಕೆಗಳು ಬೇಕು?

ಉ: ಆಸ್ತಮಾ ಮತ್ತು ಸಿಒಪಿಡಿ ರೋಗಿಗಳು ಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಸಮಯದಲ್ಲಿ ಮನೆಯಲ್ಲಿಯೇ ಇರುವುದು ಉತ್ತಮ. ತುರ್ತು ಇನ್ಹೇಲರ್ಗಳನ್ನು (ಔಷಧಿ ಯುಕ್ತ ಸೇದುವ ಸಾಧನಗಳು) ತಕ್ಷಣವೇ ಬಳಿಸಲು ತಯಾರಾಗಿಡಿ, ಮತ್ತು ಮನೆಯೊಳಗಿನ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಗಳಿ ಶುಚಿಗೊಳಿಸುವ ಸಾಧನಗಳನ್ನು (ಏರ್ ಪ್ಯೂರಿಫೈಯರ್) ಬಳಸಿರಿ. ಪರಿಮಳದ ದೀಪಗಳು ಮತ್ತು ಧೂಪವನ್ನು ಸಾಧ್ಯವಾದಷ್ಟು ಬಳಸಬೇಡಿ, ಏಕೆಂದರೆ ಇವು ಉಸಿರಾಟ ತೊಂದರೆಗಳನ್ನು ಹೆಚ್ಚಿಸಬಹುದು.

ಪ್ರ. 12: ಮಕ್ಕಳ ಸುರಕ್ಷತೆಗೆ ಪಟಾಕಿಗಳನ್ನು ಬಳಸುವಾಗ ತಾಯಂದಿರು ಏನು ಗಮನಿಸಬೇಕು?

ಉ: ಮಕ್ಕಳನ್ನು ಆಗಾಗ ಗಮನಿಸಿ ಹಾನಿಕಾರಕ ಘಟನೆಗಳಿಂದ ರಕ್ಷಿಸಿ. ಪಟಾಕಿಗಳನ್ನು ಹಚ್ಚುವಮುನ್ನ ಮೇಲೆ ಹೇಳಿದ ಸುರಕ್ಷತೆಯ ಕ್ರಮಗಳನ್ನು ಅನುಸರಿಸಿ, ಮಕ್ಕಳಿಗೆ ಪಟಾಕಿ ಹಚ್ಚಲು ಅನುಕೂಲಕರ ವಸ್ತ್ರಗಳನ್ನು ಧರಿಸುವಂತೆ ಹೇಳಿ, ಹತ್ತಿರದಲ್ಲಿ ನೀರಿನ ಬಕೆಟ್ ಗಳನ್ನು ಇಟ್ಟುಕೊಂಡಿರಿ. ಬೆಂಕಿ ಹಚ್ಚಿದ ನಂತರ ಸುಟ್ಟು ಶಬ್ದ ಮಾಡದ ಪಟಾಕಿಗಳನ್ನು ಮುಟ್ಟಬೇಡಿ ಎಂದು ಮಕ್ಕಳಿಗೆ ತಿಳಿಸಿ.ಅರ್ಧ ಸುಟ್ಟ ಪಟಾಕಿಗಳನ್ನು ಮುಟ್ಟಿದಾಗ ಸಿಡಿದರೆ ಕಣ್ಣು ಮತ್ತು ಮುಖದ ಭಾಗಗಳಿಗೆ ತೊಂದರೆ ಆಗಬಹುದು.

ಪ್ರ. 13: ದೀಪಾವಳಿ ಸಂಭ್ರಮದ ಸಮಯ ಮಾನಸಿಕ ಆರೋಗ್ಯವನ್ನು ಹೇಗೆ ಬಾಧಿಸುತ್ತದೆ?

ಉ: ಹಬ್ಬದ ಉತ್ಸಾಹ, ಹೆಚ್ಚು ಖರ್ಚುಮಾಡಲು ಪ್ರೇರಣೆ ಮತ್ತು ಸಾಮಾಜಿಕ ಬಾಧ್ಯತೆಗಳ ಒತ್ತಡ ಆತಂಕವನ್ನು ಉಂಟುಮಾಡಬಹುದು. ಹೆಚ್ಚಿನ ಆಹಾರ ಸೇವನೆಯಿಂದ ಪಚನವಾಗಲು ನಿಯಮಿತ ವಿಶ್ರಾಂತಿಬೇಕಾತ್ತದೆ. ಸಮುದಾಯದಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಾಮಾಜಿಕ ಏರುಪೇರುಗಳಿಂದ ಆಗುವ ದೈಹಿಕ ಮತ್ತು ಮಾನಸಿಕ ಅಸಮತೋಲನಗಳನ್ನು ನಿಭಾಯಿಸಲು ಮಾನಸಿಕ ವೈದ್ಯರ ಸಲಹೆಗಳು ಮತ್ತು ಮಾನಸಿಕ ಸ್ಥೈರ್ಯ ಬೇಕಾಗುತ್ತದೆ. ಅಂತಹ ಸಂಧರ್ಭದಲ್ಲಿ ಪ್ರಾಣಾಯಾಮ ಅಥವಾ ಧ್ಯಾನ ಮಾಡುವುದರಿಂದ ಈ ರೀತಿಯ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಬೆಳಸಿ ಕೊಳ್ಳಬಹುದು.

ಪ್ರ. 14: ಹೆಚ್ಚಿನ ವಾಯುಮಾಲಿನ್ಯವಿರುವ ಸಮಯದಲ್ಲಿ ಉಸಿರಾಟದ ಆರೋಗ್ಯವನ್ನು ಹೇಗೆ ನಿಭಾಯಿಸಬೇಕು?

ಉ: ಆಸ್ತಮಾ ಇರುವ ರೋಗಿಗಳ ಶ್ವಾಸಕೋಶಗಳು ಹೆಚ್ಚು ಸಂವೇದನಾಶೀಲತೆಯನ್ನು ಹೊಂದಿರುತ್ತವೆ. ಅಂತಹ ವ್ಯಕ್ತಿಗಳು ಪಟಾಕಿ ಹೊಗೆ ತೀವ್ರವಾಗಿರುವ ಸಮಯದಲ್ಲಿ ಮನೆಯಲ್ಲಿಯೇ ಉಳಿಯುವ ಕ್ರಮ ತೆಗೆದುಕೊಳ್ಳಬೇಕು. ಮನೆಯಲ್ಲಿ ಹೆಚ್ಚಿನ ಪರಿಣಾಮಕಾರಿ ವಾಯುಶುಧ್ಧೀಕರಣ (HEPA ಫಿಲ್ಟರ್) ಉಪಕರಣವನ್ನು ಬಳಸುವುದರಿಂದ ವಾತಾವರಣದ ಹಾನಿಕಾರಕ ಕಣಗಳನ್ನು ಕಡಿಮೆ ಮಾಡಬಹುದು. ವಾಯುಮಾಲಿನ್ಯದ ಕಾರಣ ಹೊರಗೆ ಹೆಚ್ಚಾಗಿ ಓಡಾಡಲು ಆಗುವುದಿಲ್ಲ. ಇದರಿಂದ ಶಾರೀರಿಕ ವ್ಯಾಯಾಮ ಕಡಿಮೆಯಾಗುವ ಸಂಧರ್ಭ ಬರುತ್ತದೆ. ಹಾಗಾಗಿ ಅದಕ್ಕೆ ಅನುಗುಣವಾಗಿ ಮನೆಯಲ್ಲೇ ಆಗುವ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು.

ಪ್ರ. 15: ದೀಪಾವಳಿ ನಂತರ ಪಚನ ಕ್ರಮದಲ್ಲಿ ಆಗುವ ವ್ಯತ್ಯಾಸಗಳಿಗೆ ಸುಲಭ ಚಿಕಿತ್ಸೆಗಳು ಯಾವವು?

ಉ: ಹಬ್ಬದ ಸಂದರ್ಭದಲ್ಲಿ ಪಚನಕ್ರಿಯೆ ಸರಿಯಾಗಿ ನಡೆಯಲು, ಆಹಾರ ಸೇವನೆಯಲ್ಲಿ ನಿಯಂತ್ರಣ ಇರಲಿ. ಊಟದ ನಂತರ ಒಂದು ಲೋಟ ಮೆಣಸು ಶುಂಟಿ ಚಹಾ ಸೇವಿಸುವುದು ಸಹಾಯ ಆಗಬಹುದು. ಊಟದ ನಂತರ ವೀಳ್ಯದೆಲೆ ಅಡಿಕೆ ಜಗಿಯುವುದು (ತಂಬಾಕು ಹಾಕಬಾರದು) ಹೊಟ್ಟೆ ಉಬ್ಬುವುದನ್ನು ಕಡಿಮೆ ಮಾಡುತ್ತದೆ. ಹಬ್ಬದ ನಂತರದ ದಿನದಲ್ಲಿ ಹೆಚ್ಚಿನ ಆಹಾರ ಸೇವನೆ ಮಾಡದಂತೆ ನಿಯಂತ್ರಣ ಇಟ್ಟುಕೊಂಡು, ಎಣ್ಣೆ ಪದಾರ್ಥಗಳನ್ನು ಕಡಿಮೆ ಮಾಡಿ ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ಸೇವಿಸಬೇಕು.

ಈ ಸಲಹೆಗಳನ್ನು ಪಡೆದುಕೊಂಡ, ರಾಘು ಈ ಬಾರಿ ತನ್ನ ಕುಟುಂಬದೊಂದಿಗೆ ಆರೋಗ್ಯಕರ ದೀಪಾವಳಿಯನ್ನು ಆಚರಿಸಲು ತಯಾರಾಗಿದ್ದಾನೆ. ನೀವು ಸಹ ಮೇಲೆ ಹೇಳಿದ ಕ್ರಮಗಳನ್ನು ಸಾಧ್ಯವಾದಷ್ಟು ಅಳವಡಿಕೊಂಡು ಹಬ್ಬವನ್ನು ಆರೋಗ್ಯವಾಗಿ ಆನಂದಿಸಿರಿ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande