ಸಿರಿಧಾನ್ಯಗಳ ಮಹತ್ವ ಸಾರಲು ಜಾಗೃತಿ ಅಭಿಯಾನ
ಸಿರಿಧಾನ್ಯಗಳ ಮಹತ್ವ ಸಾರಲು ಜಾಗೃತಿ ಅಭಿಯಾನ
ಕೋಲಾರದಲ್ಲಿ ಕೃಷಿ ಇಲಾಖೆಯ ಆಶ್ರಯದಲ್ಲಿ ನಡೆದ ಸಿರಿಧಾನ್ಯ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅಕ್ರಂಪಾಷ ಚಾಲನೆ ನೀಡಿದರು.


ಕೋಲಾರ, ೨೦ ನವೆಂಬರ್ (ಹಿ.ಸ) :

ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಸಿರಿಧಾನ್ಯದ ಮಹತ್ವ ಅರಿವು ಹೆಚ್ಚಾಗುತ್ತಿದೆ. ಭಾರತ ಸಿರಿಧಾನ್ಯಗಳ ತವರೂರಾಗಿದೆ. ಜಗತ್ತಿನಲ್ಲಿ ಬೆಳೆಯುವ ಸಿರಿಧಾನ್ಯಗಳ ಪೈಕಿ ಶೇ. ೪೨ ರಷ್ಟು ಸಿರಿಧಾನ್ಯವನ್ನು ನಮ್ಮ ದೇಶದಲ್ಲೇ ಬೆಳೆಯ ಲಾಗುತ್ತಿದ್ದು, ಸಿರಿಧಾನ್ಯ ಬೆಳೆಯುವಲ್ಲಿ ನಮ್ಮ ರಾಜ್ಯ ಮುಂದಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಕುರಿತು ರೈತರಿಗೆ ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ ನಡೆದ 'ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ' ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯ ಅತ್ಯುತ್ತಮ ಔಷಧಿ. ಬಹಳ ಕಡಿಮೆ ನೀರಿನಲ್ಲೂ ಸಿರಿಧಾನ್ಯ ಬೆಳೆಯ ಬಹುದಾಗಿದೆ. ರೋಗಮುಕ್ತ ಜೀವನಕ್ಕಾಗಿ ಎಲ್ಲರೂ ಸಿರಿ ಧಾನ್ಯಗಳ ಬಳಕೆಗೆ ಮುಂದಾಗಬೇಕು. ಸಿರಿಧಾನ್ಯಗಳು ಭೂಮಿಗೂ ವರದಾನ, ಆರೋಗ್ಯಕ್ಕೂ ವರದಾನ ಎಂದು ಹೇಳಿದರು.

ಅತ್ಯಧಿಕವಾದ ನಾರಿನ ಅಂಶ ಸೇರಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸತ್ವಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು, ಪಿಸ್ತಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಜೀವನಶೈಲಿ ಆಧಾರಿತ ಕೆಲವು ರೋಗಗಳಿಗೂ ಇದು ಉತ್ತಮ ಮದ್ದಾಗಿದೆ. ಆಹಾರದಲ್ಲಿ ಹೆಚ್ಚಾಗಿ ಸಿರಿಧಾನ್ಯ ಬಳಸಬೇಕು. ಈ ಧಾನ್ಯವನ್ನು ಜನಪ್ರಿಯಗೊಳಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದ ಅವರು, ನಮ್ಮ ರೈತರು ಸಾವಯವ ಹಾಗೂ ಮಿಶ್ರ ಬೇಸಾಯ ಪದ್ಧತಿ ರೂಢಿಸಿಕೊಂಡು ಸಿರಿಧಾನ್ಯವನ್ನು ಹೆಚ್ಚು ಬೆಳೆಯಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಸಾರ್ವಜನಿಕರು ಪಾಶ್ಚಾತ್ಯ ಆಹಾರ ಪದ್ಧತಿ ಗಳಿಗೆ ಮರುಳಾಗಿ ನಮ್ಮ ನಾಡಿನ ಆಹಾರ ಪದ್ಧತಿ ದೂರ ಮಾಡಿ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ. ಸಾವಯವ ಕೃಷಿ ಮೂಲಕ ಬೆಳೆಯುವ ನವಣೆ, ಸಜ್ಜೆ, ರಾಗಿ ಹಾಗೂ ದ್ವಿದಳ ಧಾನ್ಯಗಳು ನಮ್ಮ ಆರೋಗ್ಯವನ್ನು ಉತ್ತಮ ವಾಗಿರಿಸಿಕೊಳ್ಳಲು ಸಹಕಾರಿ. ಇವುಗಳ ಉಪಯೋಗದಿಂದ ರೈತರ ಬೆಳೆಗೂ ಉತ್ತಮ ಲಾಭದಾಯಕ ಬೆಲೆ ದೊರಕುತ್ತದೆ. ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳಿಂದ ಮಾಡಿದ ಆಹಾರ ಹೆಚ್ಚಾಗಿ ಬಳಸಿ ತಮ್ಮ ಆರೋಗ್ಯ ಸುಸ್ಥಿತಿಯಲ್ಲಿರಿಸಿ ಕೊಳ್ಳಬೇಕು ಎಂದರು.

ಡೊಳ್ಳು ಕುಣಿತ ಮತ್ತು ಗಾರುಡಿ ಗೊಂಬೆಗಳ ನೃತ್ಯದ ಮೂಲಕ ಜಾಥಾ ಆರಂಭವಾಯಿತು. ಕೃಷಿ ಇಲಾಖೆ ವಾಹನಗಳಲ್ಲಿ ರೈತ ಗೀತೆ, ಜಾಗೃತಿ ಸಂದೇಶಗಳನ್ನು ಭಿತ್ತರಿಸಲಾಯಿತು.

ಸಿರಿಧಾನ್ಯಗಳು ಸೇವಿಸಿ ಆರೋಗ್ಯ ವೃದ್ಧಿಸಿ, ನವಣೆ ಉಣಿಸು ಬವಣೆ ಬಿಡಿಸು, ಊದಲು ತಿನ್ನೋರ್ಗೆ ಉಬ್ಬಸಾ ಇಲ್ಲ, ಬರಗ ಇದ್ರೆ ಬರಗಾಲದಲ್ಲೂ ಬದುಕು, ಕೊರಲೆ ತಿಂದು ಕೊರಗೋದು ಬಿಡು, ಹಾರಕ ತಿಂದೋರು ಹಾರ್ತ ಹೋದ್ರು, ಸಜ್ಜೆ ತಿಂದು ವಜ್ಜೆ (ವಜನು-ಭಾರ) ಹೊರು ಜೋಳವನ್ನು ತಿಂಬುವನು ತೋಳದಂತಾಗುವನು ಎನ್ನುವ ಫಲಕಗಳನ್ನು ಹಿಡಿದು ಜಾಥಾ ನಡೆಸಿದರು.

ಇದಕ್ಕೂ ಮುನ್ನ ನಗರದ ಜ್ಯುನಿಯರ್ ಕಾಲೇಜು ಆವರಣದಲ್ಲಿ ಸಾಮೂಹಿಕ ಏರೋಬಿಕ್ಸ್ ಹಾಗೂ ಲಘು ವ್ಯಾಯಾಮ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಿರಿಧಾನ್ಯಗಳ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ನಗರದ ಜ್ಯುನಿಯರ್ ಕಾಲೇಜು ಆವರಣದಿಂದ ಆರಂಭವಾದ ನಡಿಗೆ ಬಂಗಾರಪೇಟೆ ವೃತ್ತ ಮಾರ್ಗವಾಗಿ ಪರಿವಿಕ್ಷಣ ಮಂದಿರ ತಲುಪಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ , ಜಂಟಿ ಕೃಷಿ ನಿರ್ದೇಶಕರು ಸುಮಾ,ಕೃಷಿ ಉಪ ನಿರ್ದೇಶಕಿ ಭವ್ಯರಾಣಿ,ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಆನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಗೀತಾ,ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಕೃಷಿ ತಾಂತ್ರಿಕ ಅಧಿಕಾರಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ರ : ಕೋಲಾರದಲ್ಲಿ ಕೃಷಿ ಇಲಾಖೆಯ ಆಶ್ರಯದಲ್ಲಿ ನಡೆದ ಸಿರಿಧಾನ್ಯ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande