ಬಳ್ಳಾರಿ, 20 ನವೆಂಬರ್ (ಹಿ.ಸ.)
ಆ್ಯಂಕರ್: ಬಳ್ಳಾರಿ ನಗರದ ಖ್ಯಾತ ವೈದ್ಯರು, ಜನಸ್ನೇಹಿಯೂ ಆಗಿರದ್ದ ಡಾ. ಮಲ್ಲಿಕಾರ್ಜುನಗೌಡ ಹಂದ್ಯಾಳ್ (94) ಅವರು ಮನೆಯಲ್ಲಿ ಬುಧವಾರ ನಸುಕಿನಲ್ಲಿ ಅಸುನೀಗಿದ್ದಾರೆ. ಮೃತರ ಸ್ವಂತ ಊರಾದ ಹಂದ್ಯಾಳ್ ಗ್ರಾಮದಲ್ಲಿ ಬುಧವಾರ ಸಂಜೆ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿತು.
ಮೃತರು ಪತ್ನಿ, ಲೆಕ್ಕ ಪರಿಶೋಧಕರಾದ ಶಿವಪ್ರಸನ್ನ ಕುಮಾರ್, ಇಬ್ಬರು ಪುತ್ರಿಯರು, ಅಳಿಯಂದಿರರು - ಸೊಸೆ, ಮೊಮ್ಮಕ್ಕಳು, ಅಪಾರ ಸಂಖ್ಯೆಯ ಬಂಧುವರ್ಗ, ಮಿತ್ರರು ಮತ್ತು ಅಭಿಮಾನಿಗಳನ್ನು - ವೈದ್ಯಕೀಯ ವಿದ್ಯಾರ್ಥಿಗಳನ್ನು ಅಗಲಿದ್ದಾರೆ.
ಅತ್ಯಂತ ತ್ವರಿತವಾಗಿ ರೋಗಿಯ ಆರೋಗ್ಯ ಸಮಸ್ಯೆಯನ್ನು ಗುರುತಿಸಿ, ಕಡಿಮೆ ಬೆಲೆಯ ಚಿಕಿತ್ಸೆಯ ಮೂಲಕ ತ್ವರಿತವಾಗಿ ಗುಣಪಡಿಸುವಲ್ಲಿ ಸಿದ್ಧಹಸ್ತರಾಗಿದ್ದ ಡಾ. ಮಲ್ಲಿಕಾರ್ಜುನಗೌಡ ಅವರು, ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿ, ನಾಡಿನ ಖ್ಯಾತ ವೈದ್ಯರನ್ನು ನಾಡಿಗೆ ಕೊಡುಗೆ ನೀಡಿದ್ದಾರೆ.
ತಮ್ಮ ನೆಚ್ಚಿನ ಗುರುಗಳಾದ ಡಾ. ವೈ. ನಾಗೇಶಶಾಸ್ತ್ರಿ ಅವರ ಹೆಸರಲ್ಲಿ ಸಾಹಿತ್ಯ ಸಂಘವನ್ನು ಪ್ರಾರಂಭಿಸಿ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಡಾ. ಮಲ್ಲಿಕಾರ್ಜುನಗೌಡ ಅವರು ಶರಣ ಚಳವಳಿ, ಶರಣ ಸಾಹಿತ್ಯ ಮತ್ತು ಶರಣ ಪರಂಪರೆಯನ್ನು ಬೆಳೆಸುವಲ್ಲಿ ನಿಸ್ವಾರ್ಥವಾಗಿ ಶ್ರಮಿಸಿದ್ದರು. ಅಲ್ಲದೇ, ವೈ. ನಾಗೇಶಶಾಸ್ತ್ರಿಗಳ ಸ್ಮರಣಿಗಾಗಿ ಅವರ ಪುತ್ಥಳಿಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರು ಸ್ವಾಮಿ ಬಿಇಡಿ ಕಾಲೇಜಿನ ಪ್ರಾಂಗಣದಲ್ಲಿ
ಸ್ಥಾಪಿಸಿ, ಡಾ. ವೈ. ನಾಗೇಶಶಾಸ್ತ್ರಿ ಬಡಾವಣೆ ಎಂದು ನಾಮಕರಣ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ವೈದ್ಯರು, ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಆಜೀವ ಸದಸ್ಯರು, ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿ ಶೋಕ ವ್ಯಕ್ತಪಡಿಸಿ, ಕಂಬನಿ ಮಿಡಿದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್