ಕೋಲಾರ, ೨೦ ನವೆಂಬರ್ (ಹಿ.ಸ) :
ಆ್ಯಂಕರ್ : ಪ್ಲಾಸ್ಟಿಕ್‌ನಿಂದ ಸುಮಾರು ಜೀವಸಂಕುಲ, ಮಾನವರಿಗೆ ಮತ್ತು ಭೂಮಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇದರಿಂದ ಮುಂದೆ ಹವಾಮಾನ ವೈಪರೀತ್ಯಗಳಿಗೆ ಬಲಿಯಾಗಬೇಕಾದ ಪರಿಸ್ಥಿತಿ ಬರಲಿದೆ. ಈ ನಿಟ್ಟಿನಲ್ಲಿ ಯುವಜನರು ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ,ಸುಡುವುದನ್ನು ನಿಲ್ಲಿಸಿ ಮಾಲಿನ್ಯ ತಪ್ಪಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮತ್ತು ನ್ಯಾಯಾಧೀಶ ಸುನೀಲ್ ಎಸ್.ಹೊಸಮನಿ ಹೇಳಿದರು.
ಗ್ರಾಮವಿಕಾಸ, ರೈನ್ ಮ್ಯಾಟರ್ ಪೌಂಢೇಶನ್, ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ, ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ವತಿಯಿಂದ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ಗ್ರೀನ್ ವಾರಿಯರ್ಸ್ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಪ್ಲಾಸ್ಟಿಕ್‌ನಿಂದ ಜನರ ಮತ್ತು ಜಾನುವಾರುಗಳ ಮೇಲೆ ಆಗುತ್ತಿರುವ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಅಗತ್ಯ ಎಂದರು.
ಮುಳಬಾಗಿಲು ತಾಲ್ಲೂಕು ಪಂಚಾಯಿತಿ ನಿರ್ವಾಹಣಾಧಿಕಾರಿ ಸರ್ವೇಶ್, ಅಂಗಡಿಗಳಲ್ಲಿ, ಬೀದಿ ಬದಿಗಳಲ್ಲಿ ಪ್ಲಾಸ್ಟಿಕ್ ನಿಲ್ಲಿಸಬೇಕು ಮತ್ತು ಪ್ರತಿ ಗ್ರಾಮಗಳಲ್ಲಿ ಸರ್ಕಾರ ಜೊತೆಗೆ ಯುವಜನರು ಕೈಜೊಡಿಸಬೇಕೆಂದು ತಿಳಿಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮಾತನಾಡಿ, ಪ್ಲಾಸ್ಟಿಕ್‌ನಿಂದ ಉಪಯೋಗಕ್ಕಿಂತ ತೊಂದರೆ ಹೆಚ್ಚಾಗುತ್ತಿದೆ. ಆದ್ದರಿಂದ ನಮ್ಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಮತ್ತು ಪಂಚಾಯತಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡುತ್ತೇವೆ ಇದಕ್ಕೆ ಗ್ರಾಮಗಳಲ್ಲಿ ಗ್ರೀನ್ ವಾರಿಯರ್ಸ್ ತಂಡ ಸಹಕಾರಿ ಅದರ ಜೊತೆಗೆ ಗಿಡಬೆಳೆಸಿ ಅದಕ್ಕೆ ನರೇಗಾದಿಂದ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ ಮಾತನಾಡಿ, ಯುವಜನರು ದಾರಿ ತಪ್ಪುತಿದ್ದಾರೆ ಸರಿಪಡಿಸಿಕೊಂಡು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಪ್ಲಾಸ್ಟಿಕ್ ಮುಕ್ತ ಗ್ರೀನ್ ವಾರಿಯರ್ಸ್ ಅಭಿಯಾನಕ್ಕೆ ಶುಭಕೋರಿ ನಮ್ಮ ಬೆಂಬಲವಿದೆ ಎಂದು ತಿಳಿಸಿದರು. ದೇವರಾಯಸಮುದ್ರ ಗ್ರಾಮದ ಬೀದಿಗಳಲ್ಲಿ ಪ್ಲಾಸ್ಟಿಕ್ ನಿಲ್ಲಿಸಿ ಮರಗಿಡ ಬೆಳೆಸಿ ಎಂದು ಘೋಷಣೆ ಕೂಗುತ್ತಾ ಜಾಥಾ ಮೂಲಕ ಅಂಗಡಿಗಳಿಗೆ ಹೋಗಿ ಜಾಗೃತಿ ಮೂಡಿಸಲಾಯಿತು.
ಗ್ರಾಮಪಂಚಾಯಿತಿ ಅಧ್ಯಕ್ಷೆ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಳಗೊಂಡಹಳ್ಳಿ ನಾರಾಯಣಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ, ಕೃಷ್ಣಪ್ಪ, ಹೂಹಳ್ಳಿ ನಾಗರಾಜ್, ಶ್ಯಾಮಲ ಅದಿತಿ, ಗ್ರೀನ್ ವಾರಿಯರ್ಸ್ ಯುವಶಕ್ತಿ ತೇಜು, ನಂದೀತ, ಮೇಡಿಕಲ್ ಕಾಲೇಜಿನ ಸಿಬ್ಬಂದಿ ಚಂದ್ರಮತಿ, ದೇವರಾಯಸಮುದ್ರ ಗ್ರೀನ್ ವಾರಿಯರ್ಸ್ ತಂಡದ ಸದಸ್ಯರು ಭಾಗವಹಿಸಿದರು.
ಚಿತ್ರ : ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ದೇವರಾಯ ಸಮುದ್ರದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಪರಿಸರ ಹಾನಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್